ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮತಗಳ್ಳತನದ ವಿರುದ್ಧ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮುಖ್ಯಮಂತ್ರಿ ಹಾಗೂ ಸಂಪುಟ ಸಚಿವರು ರಸ್ತೆಯಲ್ಲಿ ಕುಳಿತು ಧರಣಿ ನಡೆಸಿರುವುದಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಕೇವಲ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ರಾಜಕೀಯ ಪ್ರಹಸನ ಎಂದು ಲೇವಡಿ ಮಾಡಿದ್ದಾರೆ.
ಜೆ.ಪಿ.ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರ ಪ್ರತಿಭಟನೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಎಸ್.ಐ.ಆರ್ ಪ್ರಕ್ರಿಯೆ ಶುರುವಾದಾಗ ನಿರಂತರ ಅಕ್ರಮಗಳನ್ನು ಎಸಗಿದ ಕಾಂಗ್ರೆಸ್ ಪಕ್ಷವೇ ಅದರ ವಿರುದ್ಧ ಮಾತನಾಡುವುದು 'ಭೂತದ ಬಾಯಲ್ಲಿ ಭಗವದ್ಗೀತೆ' ಬಂದಂತಿದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ನಿಂದಲೇ ಅಕ್ರಮ: ಎಸ್.ಐ.ಆರ್ ಶುರುವಾದಾಗ ಕಲ್ಯಾಣ ಮಂಟಪಗಳು, ಸಮುದಾಯ ಭವನಗಳು ಹಾಗೂ ಮನೆಗಳಲ್ಲಿ ಜನರನ್ನು ಗುಂಪು ಸೇರಿಸಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಿದ್ದೇ ಕಾಂಗ್ರೆಸ್ ನಾಯಕರು. ಈ ಕುರಿತು ಜೆಡಿಎಸ್ ಹಾಗೂ ಎನ್.ಡಿ.ಎ ಮೈತ್ರಿಕೂಟದಿಂದ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅಂದು ಮೌನವಾಗಿದ್ದ ಸರ್ಕಾರ ಈಗ ದೆಹಲಿ ನಾಯಕರ ಬಿಸಿ ಮುಟ್ಟಿದ ನಂತರ ನಾಟಕ ಶುರು ಮಾಡಿದೆ.
ನೈಸ್ ಹಗರಣದಿಂದ ಗಮನ ಬೇರೆಡೆಗೆ ಸೆಳೆಯಲು ಯತ್ನ:
ಮುಖ್ಯಮಂತ್ರಿ ಮತ್ತು ಅವರ ಕುಟುಂಬ ಸದಸ್ಯರು ನೈಸ್ ಕಂಪನಿ ಜೊತೆ ಶಾಮೀಲಾಗಿ ಯೋಜನೆಯ ಭೂಮಿಯನ್ನು ಲಪಟಾಯಿಸಿರುವ ದಾಖಲೆಗಳನ್ನು ತಾನು ಬಹಿರಂಗಪಡಿಸಿದ್ದೆ. ಈ ವಿಷಯ ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಕಾರಣ, ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸಿಎಂ ಮತ್ತು ಸಚಿವರು ಈ ಎಸ್.ಐ.ಆರ್. ವಿಷಯವನ್ನು ಮುನ್ನೆಲೆಗೆ ತಂದು ಧರಣಿ ನಾಟಕವಾಡುತ್ತಿದ್ದಾರೆ ಎಂದು ನೇರ ಆರೋಪ ಮಾಡಿದರು.
ಖಜಾನೆ ಖಾಲಿ ಆರೋಪ: ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಖಜಾನೆ ಖಾಲಿಯಾಗಿದೆ. ನೈಸ್ ಯೋಜನೆಯನ್ನು ತೆಗೆದುಕೊಳ್ಳಲು ಸರ್ಕಾರದ ಬಳಿ ಹಣವಿಲ್ಲ, ಬೇಕಿದ್ದರೆ ವಿಧಾನಸೌಧ ಮತ್ತು ವಿಕಾಸಸೌಧವನ್ನು ತನಗೆ ಬರೆದುಕೊಡಬೇಕು ಅಥವಾ 2 ಲಕ್ಷ ಕೋಟಿ ರೂ. ನೀಡಬೇಕು ಎಂದು ನೈಸ್ ಗುತ್ತಿಗೆದಾರನೇ ಹೇಳಿಕೆ ನೀಡಿದ್ದಾನೆ. ಅಂಥವರಿಗೆ ಮುಖ್ಯಮಂತ್ರಿಗಳೇ ರಕ್ಷಣೆ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನ್ಯಾಯಾಂಗ ನಿಂದನೆ ಪ್ರಶ್ನೆ: ಮುಖ್ಯಮಂತ್ರಿಗಳು ಸಂಪುಟ ಸಭೆಯನ್ನೇ ಬಹಿಷ್ಕರಿಸಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿರುವುದು ಹಾಸ್ಯಾಸ್ಪದ. ಸಾಮಾನ್ಯರು ಪ್ರತಿಭಟನೆ ಮಾಡಲು ಹೋದರೆ ನ್ಯಾಯಾಲಯದ ಆದೇಶವಿದೆ ಎಂದು ತಡೆಯುವ ಪೊಲೀಸರು, ಮುಖ್ಯಮಂತ್ರಿಗೆ ಮಾತ್ರ ಪ್ರತಿಭಟನೆ ನಡೆಸಲು ಹೇಗೆ ಅವಕಾಶ ಮಾಡಿಕೊಟ್ಟರು? ಇದು ನ್ಯಾಯಾಂಗ ಉಲ್ಲಂಘನೆ ಆಗುವುದಿಲ್ಲವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಸ್ವಂತಿಕೆ ಇಲ್ಲದ ಆಡಳಿತ: ಈ ಸರ್ಕಾರ ಸ್ವಂತ ಮೆದುಳಿನಿಂದ ಆಡಳಿತ ನಡೆಸುತ್ತಿಲ್ಲ. ದೆಹಲಿಗೆ ಹೋಗಿ ಅಧಿನಾಯಕರ ಅಪ್ಪಣೆ ಪಡೆದು ಇಲ್ಲಿ ಬಂದು ಕುಣಿಯುತ್ತಿದ್ದಾರೆ. ಅಹಿಂದ ಮತದಾರರ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳುವ ಮುಖ್ಯಮಂತ್ರಿಗಳು, ತಮ್ಮ ಸಂಪುಟದಿಂದಲೇ ಅಹಿಂದ ಸಚಿವರನ್ನು ನಿರ್ನಾಮ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.




