ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಿದ್ದ 2026-27ನೇ ಸಾಲಿನ ದಸರಾ ಕ್ರೀಡಾಕೂಟದಲ್ಲಿ ಡಬಲ್ಸ್ ಲಾನ್ ಟೆನ್ನಿಸ್ ಮಹಿಳಾ ವಿಭಾಗದಲ್ಲಿ ಭೂಮಿಕಾ ಎಸ್. ತಗಡೂರು ಮತ್ತು ದೇವಿಕಾ ಅವರ ಜೋಡಿ ಕಂಚಿನ ಪದಕ ಗೆದ್ದಿದೆ. ಬೆಂಗಳೂರಿನ ಜೈನ್ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಭೂಮಿಕಾ ತಗಡೂರು ಅವರು, ಈ ಹಿಂದೆ ನೆಟ್‌ಬಾಲ್ ಕ್ರೀಡೆಯಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ರಾಜ್ಯಮಟ್ಟದ ನೆಟ್‌ಬಾಲ್ ಕ್ರೀಡಾಕೂಟದಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಅವರು, ಎರಡು ಬಾರಿ ‘ಬೆಸ್ಟ್ ಆಲ್‌ರೌಂಡರ್’ ಪ್ರಶಸ್ತಿಗೂ ಭಾಜನರಾಗಿದ್ದಾರೆ. ರಾಷ್ಟ್ರಮಟ್ಟದ ನೆಟ್‌ಬಾಲ್ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿರುವ ಭೂಮಿಕಾ ಅವರು ಎರಡು ಬಾರಿ ಕಂಚಿನ ಪದಕ ಗೆದ್ದಿದ್ದಾರೆ. ಈ ಸಾಧನೆಗಾಗಿ ಕರ್ನಾಟಕ ಸರ್ಕಾರದ ವತಿಯಿಂದ ಅಂದಿನ ಮುಖ್ಯಮಂತ್ರಿ ಅವರಿಂದ ಸನ್ಮಾನಕ್ಕೂ ಪಾತ್ರರಾಗಿದ್ದರು.
ನೆಟ್‌ಬಾಲ್‌ನಲ್ಲಿ ಗಮನಾರ್ಹ ಸಾಧನೆ ಮಾಡಿದ ಬಳಿಕ ಲಾನ್ ಟೆನ್ನಿಸ್‌ನಲ್ಲಿಯೂ ಪದಕ ಗೆಲ್ಲುವ ಮೂಲಕ ಭೂಮಿಕಾ ಅವರು ತಮ್ಮ ಕ್ರೀಡಾ ಪ್ರತಿಭೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಲಾನ್ ಟೆನ್ನೀಸ್ ನಲ್ಲಿ ಭೂಮಿಕಾಳಿಗೆ ಜೈದೇವ್ ಪಂಜಾಬಿ ಅವರು ತರಬೇತಿ ನೀಡುತ್ತಿದ್ದಾರೆ.




