ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಕಾಕ್ರೋಚ್ ಜನತಾ ಪಾರ್ಟಿ ಶನಿವಾರ ಹಮ್ಮಿಕೊಳ್ಳಲಿರುವ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ವಿಧಿಸಲಾಗಿರುವ ವಿಪರೀತ ನಿರ್ಬಂಧಗಳು ಮತ್ತು ಸಾರಿಗೆ ಸಂಚಾರ ಕಡಿತದ ಕುರಿತು ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ನಗರದ ವಿವಿಧ ಭಾಗಗಳಿಗೆ ಜನರು ಸಂಚರಿಸುವುದರಿಂದ ಕಾನೂನು ಸುವ್ಯವಸ್ಥೆ ನೆಪದಲ್ಲಿ ಎಲ್ಲವನ್ನೂ ಸಂಪೂರ್ಣವಾಗಿ ಬಂದ್ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ ನ್ಯಾಯಾಲಯ, ಪ್ರಯಾಣಿಕರ ತೊಂದರೆ ಹಾಗೂ ಮೂಲಭೂತ ಸೌಲಭ್ಯಗಳ ಹಕ್ಕಿನ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ.
"ಯುವಕರು ಮತ್ತು ವೃದ್ಧರು ಸೇರಿದಂತೆ ಎಲ್ಲರೂ ಓಡಾಟ ನಡೆಸುತ್ತಾರೆ. ಪ್ರಯಾಣಿಕರಿಗೆ ಸಾರ್ವಜನಿಕ ಸೌಲಭ್ಯಗಳನ್ನು ಪಡೆಯುವ ಹಕ್ಕಿದೆ" ಎಂದು ಕೇಂದ್ರದ ಪರ ವಕೀಲರಿಗೆ ತಿಳಿಸಿದ ಪೀಠ, ಮುಚ್ಚಲು ಅಥವಾ ನಿಯಂತ್ರಿಸಲು ಉದ್ದೇಶಿಸಲಾದ ಮೆಟ್ರೋ ನಿಲ್ದಾಣಗಳು ಹಾಗೂ ರೈಲು ಸೇವೆಗಳ ನಿರ್ಬಂಧವನ್ನು ಮರುಪರಿಶೀಲಿಸುವಂತೆ ಸೂಚಿಸಿದೆ. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರದ ಕರ್ತವ್ಯವಾಗಿದ್ದರೂ, ಸಾರ್ವಜನಿಕರನ್ನು ಸಂಕಷ್ಟಕ್ಕೆ ನೂಕುವಂತಹ ಕಠಿಣ ಹಾಗೂ ಸಂಪೂರ್ಣ ಸ್ತಬ್ಧಗೊಳಿಸುವ ಕ್ರಮಗಳು ಸರಿಯಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.




