ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕಾರ್ಮಿಕರ ಕನಿಷ್ಠ ವೇತನ ಅಧಿಸೂಚನೆ ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ಕೈಗೊಂಡಿರುವ ತೀರ್ಮಾನ ವಿರೋಧಿಸಿ ಹಾಗೂ ಅಧಿಸೂಚನೆ ಈ ಕೂಡಲೇ ಜಾರಿ ಮಾಡಿ, ಕಾರ್ಮಿಕರಿಗೆ ಕನಿಷ್ಟ ವೇತನ ನೀಡಲು ಆಗ್ರಹಿಸಿ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ತಾಲ್ಲೂಕು ಸಂಚಾಲನ ಸಮಿತಿ ನೇತೃತ್ವದಲ್ಲಿ ತಾಲೂಕು ಪಂಚಾಯಿತಿ ಆವರಣದಲ್ಲಿನ ಶಾಸಕರ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಸರ್ಕಾರದ ಶಾಸನಬದ್ದ ಪರಿಷ್ಕೃತ ಕನಿಷ್ಠ ವೇತನ ಕೂಡಲೇ ಜಾರಿಗೊಳಿಸಲು ಸರ್ಕಾರದ ಮೇಲೆ ಒತ್ತಡ ತರಲು ಹಾಗೂ ವಿಧಾನಸಭೆಯಲ್ಲಿ ಕಾರ್ಮಿಕರ ಪರವಾಗಿ ಧ್ವನಿ ಎತ್ತುವಂತೆ ಶಾಸಕ ಧೀರಜ್ ಮುನಿರಾಜು ಅವರಿಗೆ ಮನವಿ ಸಲ್ಲಿಸಲಾಯಿತು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎ.ವೆಂಕಟೇಶ್ ಮಾತನಾಡಿ, ಕನಿಷ್ಠ ವೇತನದ ಪರಿಷ್ಕರಣೆ ಕಾರ್ಮಿಕರ ಬಹುದಿನಗಳ ಪ್ರಮುಖ ಬೇಡಿಕೆ. ಇದಲ್ಲದೆ, 2022 ರಿಂದ ಅನ್ವಯಿಸಬೇಕಾಗಿದ್ದ ವೇತನ ಹೆಚ್ಚಳವನ್ನು 2026 ರ ಮೇ 22 ರಿಂದ ಅನ್ವಯಿಸುವಂತೆ ಮಾಡಿರುವುದರಿಂದ ರಾಜ್ಯದ ಸುಮಾರು 1.77 ಕೋಟಿ ಕಾರ್ಮಿಕರು 4 ವರ್ಷಗಳ ವೇತನ ಹೆಚ್ಚಳದ ಪ್ರಯೋಜನದಿಂದ ವಂತಿರಾಗಿದ್ದಾರೆ. ಕೈಗಾರಿಕೆಗೆ ಬಂಡವಾಳ ಹೂಡಿಕೆ, ಭೂಮಿ, ಮೂಲಸೌಕರ್ಯ ಮತ್ತು ವಿವಿಧ ಪ್ರೋತ್ಸಾಹಧನ ನೀಡುತ್ತಿರುವ ಸಂದರ್ಭದಲ್ಲಿ ಆ ದುಡಿಯುವ ಕಾರ್ಮಿಕರ ಜೀವನಮಟ್ಟ ವೇತನ, ಕಾನೂನು ಬದ್ದ ಹಕ್ಕುಗಳ ರಕ್ಷಣೆಯನ್ನೂ ಸರ್ಕಾರ ಸಮಾನ ಆದ್ಯತೆಯಿಂದ ಪರಿಗಣಿಸಬೇಕಾಗಿದೆ.
2. ಆ ಕೈಗಾರಿಕೆಗಳಲ್ಲಿ ಈ ದಿಸೆಯಲ್ಲಿ ರಾಜ್ಯ ಸರ್ಕಾರ ಮೇ 22, 2026 ರಂದು ಹೊರಡಿಸಿರುವ ಶಾಸನಬದ್ಧ ಮಷ್ಕೃತ ಕನಿಷ್ಠವೇತನದ ಅಂತಿಮಅಧಿಸೂಚನೆಯನ್ನು ವಿಳಂಬವಿಲ್ಲದೆ ಜಾರಿಗೊಳಿಸಬೇಕಿದೆ. ಕಾರ್ಮಿಕರಿಗೆ ಶಾಸನಬದ್ಧ ಕನಿಷ್ಠ ವೇತನಕ್ಕಿಂತ ಕಡಿಮೆ ವೇತನ ನೀಡದಂತೆ ಸಂಬಂಧಪಟ್ಟ ಕಾರ್ಮಿಕ ಇಲಾಖೆ ಹಾಗೂ ಅಧಿಕಾರಿಗಳ ಮೂಲಕ ಕಟ್ಟುನಿಟ್ಟಿನ ಜಾರಿ, ಪರಿಶೀಲನೆ ನಡೆಸುವಂತೆ ಒತ್ತಾಯಿಸಬೇಕು. ಶಾಸಕರು ಸರ್ಕಾರವನ್ನು ಗುತ್ತಿಗೆ, ತಾತ್ಕಾಲಿಕ ಹಾಗೂ ಇತರೆ ಅಸ್ಥಿರ ಉದ್ಯೋಗ ವ್ಯವಸ್ಥೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೂ ಅನ್ವಯಿಸುವ ಕಾನೂನುಬದ್ದ ಕನಿಷ್ಠ ವೇತನ ಮತ್ತು ಇತರೆ ಕಾನೂನುಬದ್ದ ಸೌಲಭ್ಯ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ರಾಜ್ಯದ ಕಾರ್ಮಿಕ ವರ್ಗಕ್ಕೆ ಸಂಬಂಧಿಸಿದ ಈ ಪ್ರಮುಖ ವಿಚಾರವನ್ನು ಕರ್ನಾಟಕ ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಕಾರ್ಮಿಕರ ಪರವಾಗಿ ತಮ್ಮ ಧ್ವನಿ ಎತ್ತಬೇಕು.
ಸರ್ಕಾರ ಕೂಡಲೇ ಭರವಸೆ ನೀಡಿದಂತೆ ಕಾರ್ಮಿಕರ ಬೇಡಿಕೆ ಕುರಿತು ಚರ್ಚಿಸಲು ಸಭೆ ನಡೆಸಬೇಕು. 4 ಕಾರ್ಮಿಕ ಸಂಹಿತೆಗಳ ಜಾರಿ ಬೇಡ, ಪರಿಷ್ಕೃತ ಕನಿಷ್ಠ ವೇತನ ಕೂಡಲೇ ಜಾರಿಮಾಡಿ, ಸ್ಟೀಂ ನೌಕರರ ಕಾಯಂಮಾತಿ ಮತ್ತು ಕನಿಷ್ಠವೇತನ ವ್ಯಾಪ್ತಿಗೆ ತರಬೇಕಿದೆ. ಆಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆ ನೀಡಿ, ಗುತ್ತಿಗೆ ಹೊರಗುತ್ತಿಗೆ ಪದ್ದತಿ ರದ್ದುಮಾಡಿ, ಕಾಯಂಮಾತಿಗಾಗಿ ಅಗತ್ಯ ಶಾಸನ ರೂಪಿಸಿ, ವಸತಿ ರಹಿತ ಕಾರ್ಮಿಕರಿಗೆ ವಸತಿ ಕಲ್ಪಿಸಿ ಬಿಪಿಎಲ್ ಕಾರ್ಡ್ ಪಡೆಯಲು ಆದಾಯ ಮಿತಿ ಹೆಚ್ಚಿಸುವಂತೆ ಆಗ್ರಹಿಸಿದರು. ಮನವಿ ಸ್ವೀಕರಿಸಿದ ಶಾಸಕ ಧೀರಜ್ ಮುನಿರಾಜು, ಮನವಿ ಪತ್ರದಲ್ಲಿರುವ ಅಂಶಗಳನ್ನು ಅಧ್ಯಯನ ಮಾಡಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಿಐಟಿಯು ತಾಲ್ಲೂಕು ಸಂಚಾಲಕ ರೇಣುಕಾರಾಧ್ಯ, ರೈತ ಮುಖಂಡರಾದ ಆರ್.ಚಂದ್ರ ತೇಜಸ್ವಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷರಾದ ಎಚ್. ಆರ್. ನಳಿನಾಕ್ಷಿ ಎನ್.ಕೆ. ಬಸವರಾಜು, ಕಾರ್ಯದರ್ಶಿ ಅಂಜುಮ್ ಖಾನ್, ಎಲ್.ಸಿ.ಸುಮಾ ಅನಿಲ್ ಗುಪ್ತ ತಾಲೂಕು ಸಂಚಾಲಕ ಪಿ.ಕೆ.ವೆಂಕಟೇಶ್, ಮನೀಶ್ ಶರ್ಮಾ, ನಿರ್ಮಲಾ, ಮೋಷನ್ ರಾಜ್, ಸಾಧಿಕ್ ಪಾಷಾ, ವಿಜಾಜ್ ಪಾಣಾ ಹಾಜರಿದ್ದರು.




