ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಸುಮಾರು 50 ಲಕ್ಷಕ್ಕೂ ಅಧಿಕ ಮತದಾರರ ಹೆಸರುಗಳನ್ನು ವ್ಯವಸ್ಥಿತವಾಗಿ ಡಿಲಿಟ್ ಮಾಡಲು ಕೆಲವು ವಿರೋಧ ಪಕ್ಷದ ನಾಯಕರು ನಕಲಿ ಅರ್ಜಿಗಳನ್ನು ಸಲ್ಲಿಸುವ ಮೂಲಕ ಬೃಹತ್ 'ಸಂಚು' ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಇಂದು ತಮ್ಮ ಗೃಹ ಕಚೇರಿ 'ಕೃಷ್ಣಾ'ದಲ್ಲಿ ಸುದೀರ್ಘ ಸುದ್ದಿಗೋಷ್ಠಿ ನಡೆಸಿ ಸಮಗ್ರ ಮಾಹಿತಿ ಬಿಡುಗಡೆ ಮಾಡಿದ ಬಳಿಕ, ಸಿಎಂ ಡಿ.ಕೆ. ಶಿವಕುಮಾರ್ ಅವರು ಸಚಿವರು ಹಾಗೂ ಕಾಂಗ್ರೆಸ್ ನಾಯಕರೊಂದಿಗೆ ನೇರವಾಗಿ ರಾಜ್ಯ ಚುನಾವಣಾ ಆಯೋಗದ ಕಚೇರಿಗೆ ತೆರಳಿದರು.
ಚುನಾವಣಾ ಆಯುಕ್ತರ ಭೇಟಿ ಹಾಗೂ ಆಕ್ರೋಶ:ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರನ್ನು ಭೇಟಿ ಮಾಡಿದ ಸಿಎಂ ಹಾಗೂ ಸಚಿವರು, ಎಸ್‌ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮ ಹಾಗೂ ಮತದಾರರ ಹೆಸರುಗಳನ್ನು ಅಳಿಸುವ ಷಡ್ಯಂತ್ರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ತಪ್ಪಿತಸ್ಥರ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದರು. ಮನವಿಯನ್ನು ಸ್ವೀಕರಿಸಿದ ಚುನಾವಣಾ ಆಯುಕ್ತರು ಈ ಬಗ್ಗೆ ಪರಿಶೀಲಿಸಿ, ಎರಡು ದಿನಗಳ ಕಾಲಾವಕಾಶದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಆದರೆ ಇದಕ್ಕೆ ಒಪ್ಪದ ಮುಖ್ಯಮಂತ್ರಿ ಹಾಗೂ ಸಚಿವರು, ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಾಗುವವರೆಗೂ ಚುನಾವಣಾ ಆಯೋಗದ ಕಚೇರಿಯಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
"ಮೊದಲು ಪ್ರಕರಣ ದಾಖಲಿಸಿ, ಕ್ರಮದ ಖಚಿತ ಭರವಸೆ ನೀಡಿ, ಅಲ್ಲಿಯವರೆಗೂ ನಾವು ಈ ಜಾಗ ಬಿಡುವುದಿಲ್ಲ" ಎಂದು ಆಯೋಗದ ಕಚೇರಿಯಲ್ಲೇ ಕುಳಿತು ತೀವ್ರ ವಿರೋಧ ವ್ಯಕ್ತಪಡಿಸಿದರು.ಸಿಇಒ ಕಚೇರಿ ಮುಂದೆ ಮುಂದುವರಿದ ಧರಣಿ:ಚುನಾವಣಾ ಆಯೋಗದ ಧೋರಣೆಯನ್ನು ಖಂಡಿಸಿ ಹಾಗೂ ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರು ಹಾಗೂ ಪ್ರಮುಖ ಕಾಂಗ್ರೆಸ್ ನಾಯಕರು ಸದ್ಯ ಮುಖ್ಯ ಚುನಾವಣಾ ಅಧಿಕಾರಿ ಕಚೇರಿ ಮುಂದೆ ಧರಣಿ ಮುಂದುವರೆಸಿದ್ದಾರೆ.




