ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯ ನೀರಾವರಿ ಆಶೋತ್ತರವಾದ 'ಭದ್ರಾ ಮೇಲ್ದಂಡೆ ಯೋಜನೆ'ಯ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಚಿತ್ರದುರ್ಗ ಜಿಲ್ಲೆ), ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು ಸರ್ಕಾರದ ಬಳಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದೆ.
ಚಿತ್ರದುರ್ಗ ಜಿಲ್ಲೆಯ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷರಾದ ಹೆಚ್.ಆರ್ ತಿಮ್ಮಯ್ಯ, ಅಧ್ಯಕ್ಷರಾದ ಜಿ. ಕೆ ನಾಗರಾಜ್ ಹಾಗೂ ಕಾರ್ಯಾಧ್ಯಕ್ಷ ಬಿ.ಎ.ಅಂಗಾರೆಡ್ಡಿ ಅವರ ನೇತೃತ್ವದಲ್ಲಿ ಈ ಮನವಿ ಸಲ್ಲಿಸಲಾಗಿದ್ದು, ಚಿತ್ರದುರ್ಗ ಜಿಲ್ಲೆಯ ನೀರಾವರಿ ಮತ್ತು ರೈತರ ಪ್ರಮುಖ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ.
ಮನವಿಯಲ್ಲಿರುವ ಪ್ರಮುಖ ಅಂಶಗಳು ಹಾಗೂ ಬೇಡಿಕೆಗಳು:
ಕೇಂದ್ರದ ಅನುದಾನ ಹಾಗೂ ಯೋಜನೆ ವಿಳಂಬ: ಭದ್ರಾ ಮೇಲ್ದಂಡೆ ಕಾಮಗಾರಿ 2008ರಲ್ಲಿ ಆರಂಭಗೊಂಡು 18 ವರ್ಷಗಳು ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಯೋಜನಾ ವೆಚ್ಚ ದಿನೇ ದಿನೇ ಏರಿಕೆಯಾಗುತ್ತಿದೆ. ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಬೇಕಿರುವ ₹5,300 ಕೋಟಿ ಅನುದಾನಕ್ಕಾಗಿ ಸಚಿವರು ಹಾಗೂ ಸಂಸದರು ದೆಹಲಿಗೆ ತೆರಳಿ ಶೀಘ್ರವೇ ಅನುದಾನ ತರಬೇಕೆಂದು ರೈತ ಸಂಘ ಒತ್ತಾಯಿಸಿದೆ.
ತುಂಗಾದಿಂದ ಭದ್ರಾ ನೀರಿನ ಕಾಮಗಾರಿ: ತುಂಗಾದಿಂದ ಭದ್ರಾ ಜಲಾಶಯಕ್ಕೆ ನೀರು ಹರಿಸುವ ಕಾಮಗಾರಿ ಪೂರ್ಣಗೊಳ್ಳದ ಕಾರಣ ಅಂತರ ಜಿಲ್ಲೆಗಳ ರೈತರಲ್ಲಿ ಗೊಂದಲ ಮೂಡುತ್ತಿದ್ದು, ಇದನ್ನು ತಕ್ಷಣ ಸರಿಪಡಿಸಬೇಕು.
ಚಿತ್ರದುರ್ಗ ಶಾಖಾ ನಾಲೆ ಮತ್ತು ನೀರು ಪೋಲು ತಡೆ: ಚಿತ್ರದುರ್ಗ ಶಾಖಾ ನಾಲೆಯ ನೀರು ಕರೆಗಳಿಗೆ ತಲುಪುತ್ತಿಲ್ಲ. ನಾಲೆಯ ಮಾರ್ಗ ಮಧ್ಯೆ ಅಕ್ರಮವಾಗಿ ಪಂಪ್‌ಸೆಟ್‌ಗಳನ್ನು ಅಳವಡಿಸಿ ನೀರು ಕದಿಯಲಾಗುತ್ತಿದ್ದು ಹಾಗೂ ಎಸ್ಕೇಪ್ ಮೂಲಕ ನೀರು ಪೋಲಾಗುತ್ತಿರುವುದನ್ನು ತಡೆಯಬೇಕು.
ತುಮಕೂರು ಶಾಖಾ ನಾಲೆ ಕಾಮಗಾರಿ: ತುಮಕೂರು ಶಾಖಾ ನಾಲೆಯ ಕಾಮಗಾರಿ ಅಪೂರ್ಣಗೊಂಡಿದ್ದು, ಅಗತ್ಯ ಅನುದಾನ ನೀಡಿ ಶೀಘ್ರ ಮುಕ್ತಾಯಗೊಳಿಸಬೇಕು.
ವಿ.ವಿ.ಸಾಗರ ಜಲಾಶಯಕ್ಕೆ ನೀರಿನ ಹಂಚಿಕೆ ಹೆಚ್ಚಳ: ಮಧ್ಯ ಕರ್ನಾಟಕದ ಜಲಪಾತ್ರೆಯಾದ ವಾಣಿ ವಿಲಾಸ ಸಾಗರಕ್ಕೆ ಭದ್ರಾ ಮೇಲ್ದಂಡೆ ಯೋಜನೆಯಿಂದ ಮೊದಲು ನಿಗದಿಯಾಗಿದ್ದ 5 ಟಿ.ಎಂ.ಸಿ. ನೀರನ್ನು 2 ಟಿ.ಎಂ.ಸಿ.ಗೆ ಕಡಿತಗೊಳಿಸಲಾಗಿದೆ. ಇದನ್ನು ಸರಿಪಡಿಸಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿಸಬೇಕು. ಅಲ್ಲದೆ ಎತ್ತಿನಹೊಳೆ ಯೋಜನೆಯಿಂದಲೂ ನೈಸರ್ಗಿಕವಾಗಿ ಹರಿದು ಬರುವ ನೀರನ್ನು ಸೂಕ್ತವಾಗಿ ಹಂಚಿಕೆ ಮಾಡಬೇಕು.

ವಿ.ವಿ.ಸಕ್ಕರೆ ಕಾರ್ಖಾನೆ ಪುನಶ್ಚೇತನ: ಹಿರಿಯೂರು ತಾಲೂಕಿನಲ್ಲಿರುವ ವಿ.ವಿ. ಸಕ್ಕರೆ ಕಾರ್ಖಾನೆಯು 270 ಎಕರೆ ಪ್ರದೇಶವನ್ನು ಹೊಂದಿದ್ದು, ನೀರಿನ ಅಭಾವದಿಂದ ಕಬ್ಬು ಬೆಳೆಯಲಾಗದೆ ಸ್ಥಗಿತಗೊಂಡಿದೆ. ಈ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಬೇಕು ಅಥವಾ ಪರ್ಯಾಯ ಕೈಗಾರಿಕೆಗಳನ್ನು ಪ್ರಾರಂಭಿಸಿ ರೈತರಿಗೆ ನೆರವಾಗಬೇಕು.
ಕಳೆದ 40 ವರ್ಷಗಳಿಂದ ಈ ಭಾಗದ ರೈತರು ನೀರಾವರಿಗಾಗಿ ಹೋರಾಟ ನಡೆಸುತ್ತಿದ್ದು, ಸರ್ಕಾರವು ಕಾಲಮಿತಿಯಲ್ಲಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ರೈತ ಮುಖಂಡರು ಮನವಿಯಲ್ಲಿ ವಿನಂತಿಸಿದ್ದಾರೆ.




