ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪ್ರಗತಿಶೀಲ ಮತ್ತು ಆಧುನಿಕ ವಿಶ್ವಕ್ಕೆ ಉತ್ಕೃಷ್ಟ ನೀತಿ ಪಾಠ ಹಾಗೂ ಆಧ್ಯಾತ್ಮಿಕ ಮಾರ್ಗದರ್ಶನ ನೀಡಲು ಬೌದ್ಧ ಧರ್ಮದ ಅವಶ್ಯಕತೆ ಅತ್ಯಂತ ಅಗತ್ಯವಾಗಿದೆ ಎಂದು ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಬಿ.ಪಿ ತಿಪ್ಪೇಸ್ವಾಮಿ ಹೇಳಿದರು.
ನಗರದ ಕೋಟೆನಾಡು ಬುದ್ಧ ವಿಹಾರದಲ್ಲಿ ಆಯೋಜಿಸಲಾಗಿದ್ದ ಐದನೇ ವರ್ಷದ ‘ಬುದ್ಧ ಧರ್ಮ ದೀಕ್ಷಾ ಸಂಭ್ರಮಾಚರಣೆ’ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಶೀಘ್ರ ಚೇತರಿಕೆಗೆ ಬುದ್ಧನಲ್ಲಿ ಪ್ರಾರ್ಥಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಖ್ಯಾತ ಇತಿಹಾಸಜ್ಞ ಇ.ಜಿ. ಟೇಲರ್ ಅವರ 'ಬೌದ್ಧ ಧರ್ಮ ಹಾಗೂ ಆಧುನಿಕ ಚಿಂತನೆ' ಗ್ರಂಥವನ್ನು ಉಲ್ಲೇಖಿಸಿದ ಅವರು, "ಮಾನವ ತನ್ನನ್ನು ತಾನೇ ಸ್ವಯಂ ಆಳಿಕೊಳ್ಳುವುದು ಮತ್ತು ಪ್ರೀತಿ-ವಿವೇಕಗಳ ಉನ್ನತ ಶಿಖರಕ್ಕೆ ಏರುವುದೇ ನಾಗರಿಕತೆಯ ಲಕ್ಷಣ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಆಶಯದಂತೆ ಪ್ರಬುದ್ಧ ಸಮಾಜ ನಿರ್ಮಾಣಕ್ಕಾಗಿ ನಾವೆಲ್ಲರೂ ದಮ್ಮ ಚಕ್ರವನ್ನು ಮುನ್ನಡೆಸಬೇಕಿದೆ," ಎಂದರು.
ನಗರಸಭೆ ಮಾಜಿ ಅಧ್ಯಕ್ಷ ನಿರಂಜನಮೂರ್ತಿ ಮಾತನಾಡಿ, "ಶೋಷಿತ ಸಮಾಜದ ಪ್ರಬಲ ಧ್ವನಿಯಾಗಿರುವ ಡಾ. ಜಿ. ಪರಮೇಶ್ವರ್ ಅವರು ಶೀಘ್ರ ಗುಣಮುಖರಾಗಿ ನಾಡಸೇವೆಗೆ ಮರಳಲಿ," ಎಂದು ಆಶಿಸಿದರು. ಫುಲೆ ಅಧ್ಯಯನ ಕೇಂದ್ರದ ಮುಖ್ಯಸ್ಥ ರಾಮಣ್ಣ ಮಾತನಾಡಿ, "ಬಹುಸಂಸ್ಕೃತಿಯ ಭಾರತದಲ್ಲಿ ಐಕ್ಯತೆ ಹಾಗೂ ಸಹಿಷ್ಣುತೆ ಮೂಡಿಸಲು ಬುದ್ಧನ ಮಾರ್ಗವೇ ಸೂಕ್ತ," ಎಂದರು.
ಇದೇ ಸಂದರ್ಭದಲ್ಲಿ ಡಾ. ಜಿ. ಪರಮೇಶ್ವರ್ ಅವರ ಆರೋಗ್ಯ ಸುಧಾರಣೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಹಿರಿಯರಾದ ಆಯುಷ್ಮಾನ್ ಹಿರಿಯೂರು ಕೃಷ್ಣಪ್ಪ ಬುದ್ಧ ವಂದನೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ರಾಮ್ ಶೇಖರ್, ಬಿಎಸ್ಐ ಮಹಿಳಾ ಕಾರ್ಯದರ್ಶಿ ಶಕುಂತಲಾ, ಲಕ್ಷ್ಮೀದೇವಿ, ನಿವೃತ್ತ ಸಬ್ ಇನ್ಸ್ಪೆಕ್ಟರ್ ಕೃಷ್ಣಪ್ಪ, ಬೆಸ್ಕಾಂ ತಿಪ್ಪೇಸ್ವಾಮಿ, ಶಾಂತಮ್ಮ, ಗಿರಿಜಾ, ಶಾಂತಲಾ, ಬನ್ನಿಕೋಡ್ ರಮೇಶ್, ತ್ರಿವೇಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.




