ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಅಕ್ಟೋಬರ್ 3, 2026 ರಂದು ಚಿತ್ರದುರ್ಗ ನಗರದಲ್ಲಿ ನಡೆಯಲಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಮತ್ತು ಶೋಭಾಯಾತ್ರೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ ವ್ಯಾಪಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಬಿಗಿ ಪೊಲೀಸ್ ಭದ್ರತೆ ಮತ್ತು ಕಣ್ಣಾವಲು: ಮೆರವಣಿಗೆಯ ಭದ್ರತೆಗಾಗಿ ಹೊರಜಿಲ್ಲೆಗಳು ಹಾಗೂ ಬೆಂಗಳೂರು ನಗರ ಸೇರಿದಂತೆ ವಿವಿಧೆಡೆಯಿಂದ 6 ಎಸ್‌ಪಿ, 4 ಹೆಚ್ಚುವರಿ ಎಸ್‌ಪಿ, 21 ಡಿಎಸ್‌ಪಿ, 50 ಪಿಐ, 68 ಪಿಎಸ್‌ಐ ಸೇರಿದಂತೆ ಸಾವಿರಾರು ಪೊಲೀಸ್ ಸಿಬ್ಬಂದಿ, KSRP, DAR, QRT ಹಾಗೂ ಹೋಮ್ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ.
ನಗರದಾದ್ಯಂತ 159 ಪ್ರಮುಖ ಸ್ಥಳಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳು, 26 ಕಣ್ಣಾವಲು ಗೋಪುರಗಳು, 67 ವೀಡಿಯೋ ಕ್ಯಾಮೆರಾಗಳು, 49 ಸ್ಕೈ ಸೆಂಟ್ರಿಗಳು ಹಾಗೂ 05 ಡ್ರೋನ್ ಕ್ಯಾಮೆರಾಗಳ ಮೂಲಕ ಭದ್ರತೆ ಒದಗಿಸಲಾಗಿದೆ.
ಸಿ.ಸಿ.ಟಿ.ವಿ ದೃಶ್ಯಾವಳಿಗಳನ್ನು 24 ಗಂಟೆಯೂ ವೀಕ್ಷಿಸಲು ಎಸ್.ಜೆ.ಎಂ. ಡೆಂಟಲ್ ಕಾಲೇಜಿನಲ್ಲಿ ವಿಶೇಷ ಕಮಾಂಡ್ ಸೆಂಟರ್ ಹಾಗೂ ಹೆಚ್ಚುವರಿ ಕಂಟ್ರೋಲ್ ರೂಂ ತೆರೆಯಲಾಗಿದೆ.
ಸಾರ್ವಜನಿಕರ ಸುರಕ್ಷತೆಗೆ 03 ಸೆಕ್ಟರಲ್ ಮ್ಯಾಜಿಸ್ಟ್ರೇಟ್‌ಗಳು ಮತ್ತು 18 ಮೊಬೈಲ್ ಪೆಟ್ರೋಲಿಂಗ್ ಸೆಕ್ಟರ್‌ಗಳನ್ನು ರಚಿಸಲಾಗಿದೆ.
ಕಿಡಿಗೇಡಿಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸಲು 04 ಪಿಕಪ್ ಸ್ಕ್ವಾಡ್‌ಗಳು ಹಾಗೂ ಸರಗಳ್ಳತನ, ಮೊಬೈಲ್ ಕಳ್ಳತನ ತಡೆಯಲು ಅಪರಾಧ ಪತ್ತೆ ದಳವನ್ನು ನಿಯೋಜಿಸಲಾಗಿದೆ.
ಮದ್ಯ ಮಾರಾಟ, ಧ್ವನಿವರ್ಧಕ ಹಾಗೂ ಪಟಾಕಿ ನಿಷೇಧ:
ಅಕ್ಟೋಬರ್ 3ರ ಬೆಳಿಗ್ಗೆ 6:00 ಗಂಟೆಯಿಂದ ಮಧ್ಯರಾತ್ರಿ 12:00 ಗಂಟೆಯವರೆಗೆ ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು ಮತ್ತು ಚಳ್ಳಕೆರೆ ತಾಲೂಕುಗಳಾದ್ಯಂತ ಎಲ್ಲ ಮಾದರಿಯ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಅತಿಯಾದ ಶಬ್ದ ಉಂಟುಮಾಡುವ ಧ್ವನಿವರ್ಧಕಗಳು, ಪೇಪರ್ ಬ್ಲಾಸ್ಟಿಂಗ್ ಹಾಗೂ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ವಾಹನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ವ್ಯವಸ್ಥೆ: ಚಳ್ಳಕೆರೆ ಗೇಟ್‌ನಿಂದ ಎಂ.ಜಿ. ಸರ್ಕಲ್ ಮಾರ್ಗವಾಗಿ ಕಣಿವೆ ಕ್ರಾಸ್‌ವರೆಗಿನ ರಸ್ತೆಯಲ್ಲಿ ಎಲ್ಲ ಮಾದರಿಯ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.
ಬೆಂಗಳೂರು, ದಾವಣಗೆರೆ, ಶಿವಮೊಗ್ಗ, ಹೊಸಪೇಟೆ ಹಾಗೂ ಚಳ್ಳಕೆರೆ ಕಡೆಯಿಂದ ಬರುವ ವಾಹನಗಳು ಎನ್‌ಹೆಚ್-48 ರಸ್ತೆ, ಮೇದೇಹಳ್ಳಿ ರಸ್ತೆ ಹಾಗೂ ಜೆ.ಎಂ.ಐ.ಟಿ. ಸರ್ಕಲ್ ಮುಖಾಂತರ ನಗರಕ್ಕೆ ಪ್ರವೇಶಿಸಿ ಅದೇ ಮಾರ್ಗವಾಗಿ ಹಿಂತಿರುಗಬೇಕಾಗುತ್ತದೆ.
ಸಾರ್ವಜನಿಕ ವಾಹನಗಳ ನಿಲುಗಡೆಗಾಗಿ ನಗರದ 10 ಪ್ರಮುಖ ಸ್ಥಳಗಳಲ್ಲಿ (ಶ್ರೀರಾಮ ಕಲ್ಯಾಣ ಮಂಟಪದ ಬಳಿ, ಚಂದ್ರವಳ್ಳಿ ಕ್ರಾಸ್ ಮೈದಾನ, ಎ.ಪಿ.ಎಂ.ಸಿ ಯಾರ್ಡ್ ಇತ್ಯಾದಿ) ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲಾಸ್ಪತ್ರೆಗೆ ಬರುವ ಅಂಬ್ಯುಲೆನ್ಸ್‌ಗಳಿಗೆ ತುರುವನೂರು ರಸ್ತೆ, ಚಳ್ಳಕೆರೆ ಕ್ರಾಸ್ ಹಾಗೂ ಸರಸ್ವತಿಪುರಂ ಮೂಲಕ ಜೋಗಿಮಟ್ಟಿ ರಸ್ತೆಯ ಮಾರ್ಗ ನಿಗದಿಪಡಿಸಲಾಗಿದೆ.
ತುರ್ತು ಆರೋಗ್ಯ ಮತ್ತು ಸುರಕ್ಷತಾ ವ್ಯವಸ್ಥೆ:
ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು 05 ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್, 05 ಪ್ರಥಮ ಚಿಕಿತ್ಸಾ ಕೇಂದ್ರಗಳು, 06 ಪೊಲೀಸ್ ಸಹಾಯ ವಾಣಿ ಕೇಂದ್ರಗಳು ಹಾಗೂ 08 ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ.
ಜಿಲ್ಲಾಸ್ಪತ್ರೆ ಹಾಗೂ ಬಸವೇಶ್ವರ ಆಸ್ಪತ್ರೆ ಸೇರಿದಂತೆ 22 ಆಸ್ಪತ್ರೆಗಳಲ್ಲಿ 300 ಹಾಸಿಗೆಗಳು ಮತ್ತು ತಜ್ಞ ವೈದ್ಯರ ತಂಡವನ್ನು ಕಾಯ್ದಿರಿಸಲಾಗಿದೆ.
ಮೆರವಣಿಗೆ ಸಾಗುವ ಮಾರ್ಗದಲ್ಲಿ 06 ಅಗ್ನಿಶಾಮಕ ವಾಹನಗಳನ್ನು ಸನ್ನದ್ಧವಾಗಿಡಲಾಗಿದೆ.
ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ: ಸಾಮಾಜಿಕ ಜಾಲತಾಣಗಳಲ್ಲಿ ಕೋಮುಸೌಹಾರ್ದತೆಗೆ ಧಕ್ಕೆ ತರುವಂತಹ ಸುಳ್ಳು ಸುದ್ದಿ, ಪ್ರಚೋದನಕಾರಿ ಬರಹ ಅಥವಾ ಚಿತ್ರಗಳನ್ನು ಪೋಸ್ಟ್ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ. ರೌಡಿ ಅಸಾಮಿಗಳು ಮತ್ತು ಸಮಾಜಘಾತುಕ ಶಕ್ತಿಗಳ ವಿರುದ್ಧ ಈಗಾಗಲೇ ಭದ್ರತಾ ಪ್ರಕರಣಗಳನ್ನು ದಾಖಲಿಸಿ ನಿಗಾ ವಹಿಸಲಾಗಿದೆ.
ಸಾರ್ವಜನಿಕರಲ್ಲಿ ಮನವಿ: ಸಾರ್ವಜನಿಕರು ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡದೆ ಶಾಂತಿಯುತವಾಗಿ ಗಣೇಶೋತ್ಸವವನ್ನು ಆಚರಿಸಬೇಕು. ಯಾವುದೇ ಶಂಕಿತ ವ್ಯಕ್ತಿಗಳು ಅಥವಾ ಶಾಂತಿ ಕಡಕುವ ಮಾಹಿತಿ ಇದ್ದಲ್ಲಿ ತಕ್ಷಣವೇ 112, ಜಿಲ್ಲಾ ನಿಸ್ತಂತು ಕೇಂದ್ರ 9480803100 ಅಥವಾ ದೂರವಾಣಿ ಸಂಖ್ಯೆ 08194-222782 ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಕೋರಲಾಗಿದೆ.




