ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲೂಕಿನ ನೇರಲಗುಂಟೆ ಸಮೀಪದ ಕಾಟವ್ವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 46 ವಿದ್ಯಾರ್ಥಿಗಳಿಗೆ ನಗರದ ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ವತಿಯಿಂದ ಉಚಿತ ಕುಡಿಯುವ ನೀರಿನ ಬಾಟಲಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ಬಾಟಲಿ ವಿತರಿಸಿ ಮಾತನಾಡಿದ ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ನ ಅಧ್ಯಕ್ಷೆ ಅಪರ್ಣ ದೇವೇಂದ್ರಪ್ಪ ಅವರು, ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯೊಂದಿಗೆ ಸತತ ಪ್ರಯತ್ನ ಮಾಡಿ ಸಾಧನೆ ಮಾಡಬೇಕು ಎಂದು ಕರೆ ನೀಡಿದರು. ನೀಡಲಾದ ನೀರಿನ ಬಾಟಲಿಗಳನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಲು ತಿಳಿಸಿದ ಅವರು, ಮುಂದಿನ ದಿನಗಳಲ್ಲೂ ಶಾಲೆಗೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.
ಇನ್ನರ್ ವಿಲ್ ಕ್ಲಬ್ ಕಾರ್ಯದರ್ಶಿ ಡಾ. ವಿದ್ಯಾ ಐತಾಳ್ ಮಾತನಾಡಿ, "ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು". ನಮ್ಮ ಸಂಸ್ಕೃತಿಯಲ್ಲಿ ಗುರುವಿಗೆ ಪೂಜನೀಯ ಸ್ಥಾನವಿದ್ದು, ಪ್ರತಿಯೊಬ್ಬರೂ ಗುರುಗಳನ್ನು ಗೌರವಿಸಬೇಕು ಎಂದು ಕಿವಿಮಾತು ಹೇಳಿದರು.
ಕ್ಲಬ್‌ನ ಖಜಾಂಚಿ ಹಾಗೂ ನಿವೃತ್ತ ಪ್ರಾಧ್ಯಾಪಕಿ ಡಾ. ಕವಿತಾ ನಾಗೇಶ್ ಅವರು ಸ್ವಾಮಿ ವಿವೇಕಾನಂದರ ವಿಚಾರಗಳನ್ನು ನೆನಪಿಸುತ್ತಾ, "ನಿಮ್ಮ ಭವಿಷ್ಯಕ್ಕೆ ನೀವೇ ಹೊಣೆ, ಅದು ನಿಮ್ಮ ಕೈಯಲ್ಲೇ ಇದೆ" ಎಂಬುದನ್ನು ಕಥೆಯ ಮೂಲಕ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಶಾಲೆಯ ಸಹಶಿಕ್ಷಕಿ ಸಿ.ಎಸ್. ಭಾರತಿ ಚಂದ್ರಶೇಖರ್, ಸಮಾಜ ಸೇವಕ ಯತೀಶ್ ಎಂ. ಸಿದ್ದಾಪುರ, ನೀನಾ ವಿನಯಕುಮಾರ್, ಬಿ.ಸಿ. ಮಂಜುಳಾ, ಸುಮಾ, ಐಶ್ವರ್ಯ, ಪ್ರವೀಣ್, ಚೈತನ್ಯ, ಬೋರಮ್ಮ, ಸುಚಿತ್ರಾ ಹಾಗೂ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




