ಚಂದ್ರವಳ್ಳಿ ನ್ಯೂಸ್, ಬೆ೦ಗಳೂರು:
ಕರ್ನಾಟಕ ಲೋಕಸೇವಾ ಆಯೋಗವನ್ನು ಶಾಸನಬದ್ಧವಾಗಿ ಮುಚ್ಚುತ್ತೇವೆ ಎನ್ನುವ ಮುಖ್ಯಮಂತ್ರಿಗಳ ಹೇಳಿಕೆ ಕೇವಲ ಹತಾಶೆಯಷ್ಟೇ ಅಲ್ಲ, ಅದು ಬುದ್ಧಿಗೇಡಿತನ ಮತ್ತು ಅಜ್ಞಾನದ ಪರಮಾವಧಿ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ಸರಣಿ ವಾಗ್ದಾಳಿ ನಡೆಸಿರುವ ಅವರು, ಮುಖ್ಯಮಂತ್ರಿಗೆ ಶಾಸನ ಮತ್ತು ಸಾಂವಿಧಾನಿಕ ಸಂಸ್ಥೆಗಳ ಮಹತ್ವವೇ ಗೊತ್ತಿಲ್ಲದಂತಿದೆ ಎಂದು ಲೇವಡಿ ಮಾಡಿದ್ದಾರೆ.
ಬುದ್ಧಿಗೇಡಿತನದ ನಿರ್ಧಾರ: ಸಿಎಂ ಅವರ ಹೇಳಿಕೆಯು 'ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ' ಮತ್ತು 'ನೆಗಡಿ ಬಂದರೆ ಮೂಗಿಗೇ ಕತ್ತರಿ ಹಾಕಿದಂತೆ' ಇದೆ. ಸಾಂವಿಧಾನಿಕ ಸಂಸ್ಥೆಯೊಂದನ್ನು ಮುಚ್ಚುತ್ತೇವೆ ಎನ್ನಲು ಇವರಿಗೆ ನಾಚಿಕೆಯಾಗಬೇಕು.
ವಿಧಾನಸೌಧವನ್ನೇ ಮುಚ್ಚಿ: ಕೆಪಿಎಸ್‌ಸಿ ಸಂಸ್ಥೆ ಚೆನ್ನಾಗಿಯೇ ಇದೆ. ಆದರೆ ಅಲ್ಲಿಗೆ ಖದೀಮರು ಹಾಗೂ ಕೆಟ್ಟ ಜನರನ್ನು ತಂದು ಕೂರಿಸಿದ್ದು ಯಾರು? ವಸೂಲಿಗೆ ಅಂಗಡಿ ತೆರೆಯಲು ಅವಕಾಶ ಮಾಡಿಕೊಟ್ಟಿದ್ದೇ ವಿಧಾನಸೌಧದ 3ನೇ ಮಹಡಿಯಲ್ಲಿ ಕೂತವರು (ಸರ್ಕಾರ). ಆ ಲೆಕ್ಕಕ್ಕೆ ಬಂದರೆ ಮೊದಲು ವಿಧಾನಸೌಧವನ್ನೇ ಮುಚ್ಚಬೇಕು.
ಅಜ್ಞಾನ ಬಿಟ್ಟು ಅಧ್ಯಯನ ಮಾಡಿ: ನಾಲಿಗೆ ಚಪಲಕ್ಕೆ ಹೇಳಿಕೆ ನೀಡುವ ಮೊದಲು ಕೆಪಿಎಸ್‌ಸಿ ಎಂದರೇನು? ಅದರ ಸಂರಚನೆ, ಸಾಂವಿಧಾನಿಕ ರಕ್ಷಣೆ ಮತ್ತು ಅದು ನಡೆದುಬಂದ ಹಾದಿಯ ಬಗ್ಗೆ ತಿಳಿಯಿರಿ.
ಕಳೆ ಕೀಳಿ, ಹೊಲಕ್ಕೆ ವಿಷ ಹಾಕಬೇಡಿ: ಸಂಸ್ಥೆಯಲ್ಲಿ ಕಳೆ ಬಿದ್ದರೆ (ಅಕ್ರಮವೆಸಗಿದರೆ) ಅದನ್ನು ಕಿತ್ತೆಸೆಯುವ ಕೆಲಸ ಮಾಡಬೇಕೇ ಹೊರತು, ಇಡೀ ಹೊಲಕ್ಕೇ ವಿಷವುಣಿಸುವ (ಸಂಸ್ಥೆಯನ್ನೇ ಮುಚ್ಚುವ) ಕೆಲಸ ಮಾಡಬಾರದು ಎಂದು ಕಿವಿಮಾತು ಹೇಳಿದ್ದಾರೆ.




