ಚಂದ್ರವಳ್ಳಿ ನ್ಯೂಸ್ ಬೆಂಗಳೂರು: ವಿಧಾನಸೌಧದ ಪಶ್ಚಿಮ ದ್ವಾರದ (ಕೆಂಗಲ್ ಗೇಟ್) ಬಳಿ ನಿಲ್ಲಿಸಿದ್ದ ತಮ್ಮ ಕಾರನ್ನು ಪಾರ್ಕಿಂಗ್ ಸ್ಥಳಕ್ಕೆ ಕಳುಹಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಸೌಧದ ಡಿಸಿಪಿ ಯೋಗೇಶ್ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ವಿಧಾನಸೌಧದಲ್ಲಿ ನಡೆಯುತ್ತಿರುವ ವಿಶೇಷ ಅಧಿವೇಶನದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಅವರು ಮಧ್ಯಾಹ್ನದ ಊಟಕ್ಕಾಗಿ ತಮ್ಮ ಅಧಿಕೃತ ನಿವಾಸ 'ಕಾವೇರಿ'ಗೆ ತೆರಳಲು ಹೊರಟಿದ್ದರು. ಆದರೆ, ಕೆಂಗಲ್ ಗೇಟ್ ಬಳಿ ನಿಲ್ಲಿಸಲಾಗಿದ್ದ ಅವರ ಕಾರನ್ನು ಡಿಸಿಪಿ ಸೂಚನೆ ಮೇರೆಗೆ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಇದರಿಂದ ಕಾರು ವಾಪಸ್ ಬರುವವರೆಗೆ ಸಿದ್ದರಾಮಯ್ಯ ಅವರು ಗೇಟ್ ಬಳಿಯೇ ಕಾಯಬೇಕಾಯಿತು.
ಕೂಡಲೇ ಡಿಸಿಪಿ ಯೋಗೇಶ್ ಅವರನ್ನು ಸ್ಥಳಕ್ಕೆ ಕರೆಸಿದ ಸಿದ್ದರಾಮಯ್ಯ, ಕಾರು ತೆರವುಗೊಳಿಸಿದ ನಿರ್ಧಾರವನ್ನು ಪ್ರಶ್ನಿಸಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. "ಅನಗತ್ಯವಾಗಿ ಸಮಸ್ಯೆಗಳನ್ನು ಸೃಷ್ಟಿಸಬೇಡಿ. ನಿಮ್ಮ ವಿರುದ್ಧ ಪ್ರಕರಣವೊಂದು ಇದೆ ಎಂಬುದು ನೆನಪಿರಲಿ. ಎಚ್ಚರಿಕೆಯಿಂದ ಕೆಲಸ ಮಾಡಿ" ಎಂದು ಎಚ್ಚರಿಕೆ ನೀಡಿದರು ಎಂದು ಮೂಲಗಳು ತಿಳಿಸಿವೆ.
ಡಿಸಿಪಿ ಕ್ಷಮೆಯಾಚನೆ:
ಸಿದ್ದರಾಮಯ್ಯ ಅವರ ತೀವ್ರ ಆಕ್ರೋಶಕ್ಕೆ ಸ್ಪಂದಿಸಿದ ಡಿಸಿಪಿ, "ಕ್ಷಮಿಸಿ ಸರ್" ಎಂದು ಕ್ಷಮೆಯಾಚಿಸಿದರು.
ಇದೇ ವೇಳೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಮಾಧಾನಪಡಿಸಿದರು.
ಘಟನೆಯ ನಂತರ ಇನ್ಮುಂದೆ ಪಶ್ಚಿಮ ದ್ವಾರದ ಹತ್ತಿರವೇ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.




