ಚಂದ್ರವಳ್ಳಿ ನ್ಯೂಸ್, ಮೈಸೂರು:
ಸಂಪ್ರದಾಯ, ವೈವಿಧ್ಯತೆ ಮತ್ತು ವೈಭವದ ಸಮ್ಮಿಲನದೊಂದಿಗೆ ಈ ಬಾರಿಯ ಮೈಸೂರು ದಸರಾವನ್ನು ಯಾವುದೇ ರಾಜಕೀಯ ಲೇಪವಿಲ್ಲದೆ ಅರ್ಥಪೂರ್ಣವಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮೈಸೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ದಸರಾ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದರು.
ರಾಜಕೀಯ ರಹಿತ ಆಚರಣೆಗೆ ಸೂಚನೆ: ನಗರದಲ್ಲಿ ನನ್ನ ಫೋಟೋ ಸೇರಿದಂತೆ ಯಾವುದೇ ಖಾಸಗಿ ಫ್ಲೆಕ್ಸ್ಗಳಿಗೆ ಅವಕಾಶವಿಲ್ಲ. ದಸರಾ ಹಬ್ಬದ ಸೌಂದರ್ಯಕ್ಕೆ ಧಕ್ಕೆ ಬಾರದಂತೆ ವಿಜೃಂಭಣೆಯಿಂದ ಆಚರಿಸಬೇಕು.
ಗವಿಸಿದ್ಧೇಶ್ವರ ಶ್ರೀಗಳಿಗೆ ಉದ್ಘಾಟನೆಯ ಗೌರವ: ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿಯವರನ್ನು ದಸರಾ ಉದ್ಘಾಟನೆಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಆಹ್ವಾನಿಸಲಾಗುತ್ತಿದೆ. ಜಾತಿ-ಧರ್ಮದ ಭೇದವಿಲ್ಲದೆ ಎಲ್ಲ ಮಠಾಧೀಶರು, ಧಾರ್ಮಿಕ ಮುಖಂಡರನ್ನು ಆಹ್ವಾನಿಸಿ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗುವುದು.
ರಾಜವಂಶಸ್ಥರಿಗೆ ವಿಶೇಷ ಗೌರವ: ರಾಜವಂಶಸ್ಥರ ಸ್ಥಾನ ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ತರದಂತೆ ಗೌರವಪೂರ್ವಕವಾಗಿ ಆಹ್ವಾನಿಸಿ, ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯಲಾಗುವುದು.
21 ದಿನಗಳ ವೈಭವದ ದೀಪಾಲಂಕಾರ & ಡ್ರೋನ್ ಶೋ: ಈ ಬಾರಿ ವಿಶೇಷವಾಗಿ 21 ದಿನಗಳ ಕಾಲ ದೀಪಾಲಂಕಾರ ಇರಲಿದ್ದು, ಹಿಸ್ಟಾರಿಕಲ್ ಡ್ರೋನ್ ಶೋ, ಯುವ ದಸರಾ, ಕಂಬಳ ಹಾಗೂ ಆಹಾರ ಮೇಳಗಳು ಪ್ರಮುಖ ಆಕರ್ಷಣೆಯಾಗಲಿವೆ.
ಕ್ರೀಡಾಪಟುಗಳು & ಸೇನಾ ಪಡೆಗಳ ಭಾಗಿ: ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ಗೌರವ ಹಾಗೂ ಜಂಬೂಸವಾರಿಯಲ್ಲಿ ಭೂ, ವಾಯು ಮತ್ತು ನೌಕಾಪಡೆಗಳ ವಿಭಾಗಗಳು ಭಾಗವಹಿಸಲಿವೆ.
ಸಂಸ್ಕೃತಿ-ವೈವಿಧ್ಯತೆಯ ಸಮ್ಮಿಲನ: ಜಂಬೂಸವಾರಿ ಮೆರವಣಿಗೆಯಲ್ಲಿ ತುಳುನಾಡು, ಟಿಬೆಟಿಯನ್ ಸಮುದಾಯ, ನೆರೆ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕನ್ನಡ ಚಿತ್ರರಂಗದ ವೈವಿಧ್ಯಮಯ ಸ್ತಬ್ಧಚಿತ್ರಗಳು ಮತ್ತು ಕಲಾ ತಂಡಗಳಿಗೆ ಅವಕಾಶ ನೀಡಲಾಗುವುದು.
ಪ್ರವಾಸಿಗರ ಹಿತರಕ್ಷಣೆ & ಮೂಲಸೌಕರ್ಯ: ಹೋಟೆಲ್ಗಳು ಪ್ರವಾಸಿಗರಿಂದ ಹೆಚ್ಚಿನ ಹಣ ಸುಲಿಗೆ ಮಾಡದಂತೆ ಸೂಚಿಸಲಾಗಿದೆ. ಯುವ ದಸರಾ ವೀಕ್ಷಣೆಗೆ ಆಗಮಿಸುವ 2 ಲಕ್ಷಕ್ಕೂ ಹೆಚ್ಚು ಜನರಿಗೆ ಶೌಚಾಲಯ, ಕುಡಿಯುವ ನೀರು ಹಾಗೂ ಎಲ್ಇಡಿ ಪರದೆಗಳ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗುವುದು.
ಸಚಿವರು ಮತ್ತು ಪೌರಕಾರ್ಮಿಕರ ಕೊಡುಗೆ: ಪ್ರತಿ ದಿನ ಇಬ್ಬರು ಸಚಿವರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಬೆಂಬಲವಾಗಿ ಕಾರ್ಯನಿರ್ವಹಿಸಲಿದ್ದು, ನಗರ ಸ್ವಚ್ಛತೆಯಲ್ಲಿ ನಿರತರಾಗುವ ಪೌರಕಾರ್ಮಿಕರ ಸೇವೆಯನ್ನು ವಿಶೇಷವಾಗಿ ಗೌರವಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.




