ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಖಾಸಗಿ ಜಾಗದ ಮಾಲೀಕರ ಇಚ್ಛೆಗೆ ವಿರುದ್ಧವಾಗಿ ಮತ್ತು ಅವರ ಒಪ್ಪಿಗೆಯಿಲ್ಲದೇ ಭೂಮಿಯನ್ನು ಕಡ್ಡಾಯವಾಗಿ ಸ್ವಾಧೀನಪಡಿಸಿಕೊಳ್ಳುವಂತೆ ಸರ್ಕಾರಕ್ಕೆ ಆದೇಶಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಬೆಂಗಳೂರು ಪೂರ್ವ ತಾಲೂಕಿನ ಕಾಡುಬೀಸನಹಳ್ಳಿಯಲ್ಲಿ ಐಟಿ ಪಾರ್ಕ್ ನಿರ್ಮಾಣಕ್ಕಾಗಿ ಗುರುತಿಸಲಾಗಿದ್ದ ಜಾಗದ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಟ್ಟಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕ್ರಮವನ್ನು ಪ್ರಶ್ನಿಸಿ ಐಟಿ ಕಂಪನಿಯಾದ 'ಬ್ರೈಟ್ಸ್ವೋರ್ಡ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್' ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಮತ್ತು ನ್ಯಾಯಮೂರ್ತಿ ಎಚ್. ಶಾಂತಿ ಭೂಷಣ್ ಅವರಿದ್ದ ದ್ವಿಸದಸ್ಯ ಪೀಠವು ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.
ಪೂರ್ವ ಒಪ್ಪಿಗೆ ಕಡ್ಡಾಯ: ಕೆಐಎಡಿಬಿ ನಿಯಮಗಳ ಪ್ರಕಾರ ಉದ್ದೇಶಿತ ಯೋಜನೆಗೆ ಭೂಮಿ ಹಸ್ತಾಂತರಿಸುವ ಮುನ್ನ ಭೂಮಾಲೀಕರ ಪೂರ್ವ ಒಪ್ಪಿಗೆ ಪಡೆಯುವುದು ಕಡ್ಡಾಯವಾಗಿದ್ದು, ಮೇಲ್ಮನವಿ ಐಟಿ ಕಂಪನಿ ಒಪ್ಪಿಗೆ ಪಡೆಯುವಲ್ಲಿ ವಿಫಲವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಪ್ರಾಯೋಗಿಕ ತೊಂದರೆ: ವಿವಾದಿತ ಜಾಗದಲ್ಲಿ ಈಗಾಗಲೇ ವಸತಿ ವಿಲ್ಲಾಗಳು, ಲೇಔಟ್‌ಗಳು ಮತ್ತು ಕೈಗಾರಿಕಾ ಸಂಸ್ಥೆಗಳ ಕಟ್ಟಡಗಳು ನಿರ್ಮಾಣಗೊಂಡು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿವೆ. ಈ ಹಂತದಲ್ಲಿ ಅವುಗಳನ್ನು ಕೆಡವಿ ಐಟಿ ಕಂಪನಿಗೆ ಜಾಗ ನೀಡುವುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಮೂಲ ಪ್ರಕ್ರಿಯೆಯಲ್ಲೇ ಲೋಪ: ಜಾಗದ ಹಕ್ಕು ಹೊಂದಿದ್ದ ವ್ಯಕ್ತಿಗಳಿಗೆ ಕಾಯ್ದೆಯ ಸೆಕ್ಷನ್ 28(2)ರ ಅಡಿ ಕೆಐಎಡಿಬಿ ಸಮರ್ಪಕವಾಗಿ ನೋಟಿಸ್ ನೀಡಿ ವಿಚಾರಣೆ ನಡೆಸದ ಕಾರಣ ಮೂಲ ಭೂಸ್ವಾಧೀನ ಪ್ರಕ್ರಿಯೆಯಲ್ಲೇ ಲೋಪವಿತ್ತು.
ಏಕಸದಸ್ಯ ಪೀಠದ ಆದೇಶ ಎತ್ತಿಹಿಡಿತ: ಕೆಐಎಡಿಬಿ ಈ ಜಾಗವನ್ನು ಭೂಸ್ವಾಧೀನದಿಂದ ಕೈಬಿಟ್ಟಿರುವುದು ಕಾನೂನುಬದ್ಧವಾಗಿದ್ದು, ಐಟಿ ಕಂಪನಿಗೆ ಅಗತ್ಯವಿದ್ದಲ್ಲಿ ಪರ್ಯಾಯ ಜಾಗ ನೀಡುವ ಪ್ರಕ್ರಿಯೆಯನ್ನು ಪರಿಗಣಿಸಬಹುದು ಎಂದು ತಿಳಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ವಿಭಾಗೀಯ ಪೀಠ ಎತ್ತಿಹಿಡಿದಿದೆ.
ಪರಿಹಾರಕ್ಕೆ ಅವಕಾಶ: ಭೂಸ್ವಾಧೀನ ಪ್ರಕ್ರಿಯೆಗೆ ಮುಂಗಡ ಪಾವತಿಯಿಂದಾಗಿ ಕಂಪನಿಗೆ ನಷ್ಟ ಉಂಟಾಗಿದ್ದಲ್ಲಿ, ಸಿವಿಲ್ ನ್ಯಾಯಾಲಯದ ಮೂಲಕ ಸರ್ಕಾರದ ವಿರುದ್ಧ ಪರಿಹಾರ ಧನ ಕೋರಬಹುದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ: ಬ್ರೈಟ್ ಸ್ವೋರ್ಡ್ ಕಂಪನಿಯು ಕಾಡುಬೀಸನಹಳ್ಳಿಯಲ್ಲಿ ಸುಮಾರು ₹43,000 ಕೋಟಿ ವೆಚ್ಚದಲ್ಲಿ ಬೃಹತ್ ಐಟಿ ಪಾರ್ಕ್ ಸ್ಥಾಪಿಸಲು ಕರ್ನಾಟಕ ಉದ್ಯೋಗ ಮಿತ್ರಕ್ಕೆ ಮನವಿ ಸಲ್ಲಿಸಿತ್ತು. ಇದರಂತೆ ಏಕಗವಾಕ್ಷಿ ಸಮಿತಿ ಅನುಮೋದನೆ ನೀಡಿ, 8.5 ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಂಡು ಕಂಪನಿಗೆ ಹಸ್ತಾಂತರಿಸುವಂತೆ ಕೆಐಎಡಿಬಿಯ ವಿಶೇಷ ಭೂ ಸ್ವಾಧೀನಾಧಿಕಾರಿಗೆ ಸೂಚಿಸಿತ್ತು. ಇದರನ್ವಯ ಕಂಪನಿ ಶೇ. 40ರಷ್ಟು ಮೊತ್ತವಾದ ₹38 ಲಕ್ಷವನ್ನು ಮುಂಗಡವಾಗಿ ಠೇವಣಿ ಇಟ್ಟಿತ್ತು. 2004ರಲ್ಲಿ ಪ್ರಾಥಮಿಕ ಹಾಗೂ ಅಂತಿಮ ಭೂಸ್ವಾಧೀನ ಅಧಿಸೂಚನೆಗಳನ್ನು ಹೊರಡಿಸಲಾಗಿತ್ತು.
ಆದರೆ, ಭೂಸ್ವಾಧೀನಕ್ಕೆ ಆಕ್ಷೇಪಣೆ ಸಲ್ಲಿಸಿದ್ದ ಜಮೀನಿನ ಮೂಲ ಮಾಲೀಕರು (ಬಾಲಕೃಷ್ಣ ನಾಯ್ಡು ಮತ್ತು ಇತರರು) ಪ್ರಕ್ರಿಯೆ ಕೈಬಿಡುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಹಲವು ಸುತ್ತಿನ ಕಾನೂನು ಹೋರಾಟದ ಬಳಿಕ ಏಕಸದಸ್ಯ ಪೀಠ ಭೂಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಕಂಪನಿ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ವಿಚಾರಣೆ ವೇಳೆ ಐಟಿ ಕಂಪನಿಯ ಪರ ವಕೀಲರು, ಒಮ್ಮೆ ಭೂಸ್ವಾಧೀನ ಪ್ರಕ್ರಿಯೆ ಆರಂಭವಾದ ನಂತರ ಮಾಲೀಕರನ್ನು ಓಲೈಸುವುದಕ್ಕಾಗಿಯೇ ಕೆಐಎಡಿಬಿ ಕಾನೂನುಬಾಹಿರವಾಗಿ ಜಾಗವನ್ನು ಕೈಬಿಟ್ಟಿದೆ ಹಾಗೂ ಸರ್ಕಾರದ ಏಕಗವಾಕ್ಷಿ ಸಮಿತಿಯ ತೀರ್ಮಾನಕ್ಕೆ ಕೆಐಎಡಿಬಿ ಬದ್ಧವಾಗಿರಬೇಕು ಎಂದು ವಾದ ಮಂಡಿಸಿದ್ದರು. ಆದರೆ, ಅಂತಿಮವಾಗಿ ಕೋರ್ಟ್ ಕಂಪನಿಯ ಅರ್ಜಿಯನ್ನು ವಜಾಗೊಳಿಸಿದೆ.




