ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ನಗರದಲ್ಲಿ ಅತ್ಯಂತ ಶ್ರದ್ಧಾಭಕ್ತಿ ಹಾಗೂ ವೈಭವದಿಂದ ಜರುಗಿದ ‘ಹಿಂದೂ ಮಹಾಗಣಪತಿ’ಯ ಭವ್ಯ ವಿಸರ್ಜನಾ ಮೆರವಣಿಗೆ ಹಾಗೂ ಧರ್ಮಜಾಗೃತಿಯ ಮಹಾಶೋಭಾಯಾತ್ರೆಯಲ್ಲಿ ವಿಪ ಶಾಸಕ ಹಾಗೂ ಬಿಜೆಪಿ ನಾಯಕ ಸಿಟಿ ರವಿ ಭಾಗವಹಿಸಿ, ವಿಘ್ನನಿವಾರಕ ಮಹಾಗಣಪತಿಯ ದಿವ್ಯ ದರ್ಶನ ಪಡೆದು ನಾಡಿನ ಸಮಸ್ತ ಜನರ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಗಂಗಾರತಿಯ ನಯನಮನೋಹರ ವೈಭವ, ದೇಶಭಕ್ತಿಯ ಸಂಕೇತವಾದ ‘ವಂದೇ ಮಾತರಂ’ ಗಾನ, ಸಾವಿರಾರು ಭಕ್ತಾದಿಗಳ ಜೈಕಾರ ಮತ್ತು ಸಾಂಸ್ಕೃತಿಕ ಕಲಾತಂಡಗಳ ರಂಗು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದವು. ಯುವಜನತೆಯ ಅಪಾರ ಉತ್ಸಾಹ ಹಾಗೂ ಭಕ್ತಿಯೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ಈ ಶೋಭಾಯಾತ್ರೆಯು ಇಡೀ ಚಿಕ್ಕಮಗಳೂರಿನಲ್ಲಿ ಭಕ್ತಿ ಮತ್ತು ಧಾರ್ಮಿಕ ಚೈತನ್ಯದ ಅಲೆಯನ್ನು ಸೃಷ್ಟಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಈ ಭವ್ಯ ವಿಸರ್ಜನಾ ಮಹೋತ್ಸವವು ಸಮಾಜದಲ್ಲಿ ಸೌಹಾರ್ದತೆ, ಶಕ್ತಿ ಹಾಗೂ ಐಕ್ಯತೆಯನ್ನು ಮತ್ತಷ್ಟು ಗಟ್ಟಿಗೊಳಿಸಲಿ. ವಿಘ್ನಹರ್ತ ಶ್ರೀ ಗಣಪತಿಯು ಸರ್ವರಿಗೂ ಆಯುಷ್ಯ, ಆರೋಗ್ಯ ಮತ್ತು ಶ್ರೇಯಸ್ಸನ್ನು ಅನುಗ್ರಹಿಸಲಿ" ಎಂದು ಆಶಿಸಿದರು.
ಮೆರವಣಿಗೆಯಲ್ಲಿ ಸಾವಿರಾರು ಭಕ್ತಾದಿಗಳು, ಸಾರ್ವಜನಿಕರು ಹಾಗೂ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ತಂಡಗಳು ಉತ್ಸಾಹದಿಂದ ಪಾಲ್ಗೊಂಡಿದ್ದವು.




