ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇಶದ ಪ್ರಮುಖ ಉದ್ಯಮ ಸಮೂಹವಾದ ಹಿರಾನಂದಾನಿ ಗ್ರೂಪ್‌ನ ಅಂಗಸಂಸ್ಥೆ 'ಟಾರ್ಕ್ ಸೆಮಿಕಂಡಕ್ಟರ್ಸ್' ಕರ್ನಾಟಕದಲ್ಲಿ ಕಾಂಪೌಂಡ್ ಸೆಮಿಕಂಡಕ್ಟರ್ ಫ್ಯಾಬ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ತೀವ್ರ ಆಸಕ್ತಿ ವ್ಯಕ್ತಪಡಿಸಿದೆ.
ಇಂದು ಹಿರಾನಂದಾನಿ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ನಿರಂಜನ್ ಹಿರಾನಂದಾನಿ ಅವರೊಂದಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಫಲಪ್ರದ ಸಭೆ ನಡೆಸಿದರು.
ಟಾರ್ಕ್ ಸೆಮಿಕಂಡಕ್ಟರ್ಸ್ ಸಂಸ್ಥೆಯು 5G, ಇವಿ (EV) ಫಾಸ್ಟ್ ಚಾರ್ಜಿಂಗ್, ಪವರ್ ಎಲೆಕ್ಟ್ರಾನಿಕ್ಸ್, ಎಲ್.ಇ.ಡಿ (LED), ರಕ್ಷಣೆ ಹಾಗೂ ಬಾಹ್ಯಾಕಾಶ ಕ್ಷೇತ್ರಗಳಿಗೆ ಅತ್ಯಂತ ಅಗತ್ಯವಾದ 'ಗ್ಯಾಲಿಯಂ ನೈಟ್ರೈಡ್' (GaN) ತಂತ್ರಜ್ಞಾನ ಆಧಾರಿತ ಕಾಂಪೌಂಡ್ ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ. ಈ ಸಭೆಯಲ್ಲಿ ಸೆಮಿಕಂಡಕ್ಟರ್, ಕೃತಕ ಬುದ್ಧಿಮತ್ತೆ (AI) ಹಾಗೂ ಡೇಟಾ ಸೆಂಟರ್ ಮೂಲಸೌಕರ್ಯ ಕ್ಷೇತ್ರಗಳಲ್ಲಿ ದೀರ್ಘಾವಧಿಯ ಹೂಡಿಕೆ ವಿಸ್ತರಣೆಗೆ ಸಂಬಂಧಿಸಿದಂತೆ ಸಮಗ್ರ ಚರ್ಚೆ ನಡೆಸಲಾಯಿತು.
ಇದೇ ವೇಳೆ, ಡೇಟಾ ಸೆಂಟರ್‌ಗಳ ಸ್ಥಾಪನೆಗೆ ನೀರಿನ ಲಭ್ಯತೆ ಯಾವುದೇ ರೀತಿಯಲ್ಲೂ ಅಡಚಣೆಯಾಗದಂತೆ ರಾಜ್ಯ ಸರ್ಕಾರ ಕೈಗೊಂಡಿರುವ ಪೂರಕ ಕ್ರಮಗಳ ಕುರಿತು ಸಚಿವರು ಹಿರಾನಂದಾನಿ ಗ್ರೂಪ್‌ಗೆ ವಿವರಿಸಿದರು.
ಕರ್ನಾಟಕದಲ್ಲಿರುವ ಬಲಿಷ್ಠ ಚಿಪ್ ಡಿಸೈನ್ ಹೌಸ್‌ಗಳು, ಫ್ಯಾಬ್‌ಲೆಸ್ ಕಂಪನಿಗಳು ಹಾಗೂ ಜಾಗತಿಕ ಸೆಮಿಕಂಡಕ್ಟರ್ ಸಂಸ್ಥೆಗಳ ಸಂಶೋಧನೆ ಮತ್ತು ಅಭಿವೃದ್ಧಿ (R&D) ಕೇಂದ್ರಗಳ ಸುಸಜ್ಜಿತ ಪರಿಸರ ವ್ಯವಸ್ಥೆಯನ್ನು (Ecosystem) ಪರಿಗಣಿಸಿ, ಸಂಸ್ಥೆಯು ರಾಜ್ಯದಲ್ಲಿ ತನ್ನ ಘಟಕ ಸ್ಥಾಪನೆಗೆ ಒಲವು ತೋರಿದೆ. ಈ ಮಹತ್ವದ ಹೂಡಿಕೆ ಪ್ರಸ್ತಾವನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಮತ್ತು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರದಿಂದ ಅಗತ್ಯವಿರುವ ಎಲ್ಲ ರೀತಿಯ ಬೆಂಬಲ ಹಾಗೂ ಪೂರ್ಣ ಸಹಕಾರ ನೀಡುವುದಾಗಿ ಸಚಿವ ಎಂ.ಬಿ. ಪಾಟೀಲ್ ಭರವಸೆ ನೀಡಿದ್ದಾರೆ.



