ಚಂದ್ರವಳ್ಳಿ ನ್ಯೂಸ್, ದೇವನಹಳ್ಳಿ:
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಸರಣಿ ಕಾರ್ಯಾಚರಣೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಹೈಡ್ರೋಪೋನಿಕ್ ಗಾಂಜಾ ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 6 ಜನ ಪ್ರಯಾಣಿಕರನ್ನು ಬಂಧಿಸಲಾಗಿದೆ.
28 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶ
ವಿಯೆಟ್ನಾಂ ಹಾಗೂ ಬ್ಯಾಂಕಾಕ್ನಿಂದ ಲಗೇಜ್ ಬ್ಯಾಗ್ಗಳಲ್ಲಿ ಅಡಗಿಸಿ ತರಲಾಗಿದ್ದ ಒಟ್ಟು 80.11 ಕೆಜಿ ತೂಕದ ಅತ್ಯಂತ ದುಬಾರಿ ಹೈಡ್ರೋಪೋನಿಕ್ ಗಾಂಜಾವನ್ನು ಕಸ್ಟಮ್ಸ್ ತಂಡ ಪತ್ತೆಹಚ್ಚಿದೆ.
ವಶಪಡಿಸಿಕೊಂಡ ಈ ಡ್ರಗ್ಸ್ನ ಅಂದಾಜು ಮಾರುಕಟ್ಟೆ ಮೌಲ್ಯ ಸುಮಾರು 28 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕಾಕ್ನಿಂದ ಬಂದಿದ್ದ ಪ್ರಯಾಣಿಕರು ಸೇರಿದಂತೆ ಪ್ರತ್ಯೇಕ ನಾಲ್ಕು ಪ್ರಕರಣಗಳಲ್ಲಿ ಐದು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಅಧಿಕಾರಿಗಳು ತೀವ್ರ ವಿಚಾರಣೆ ಮುಂದುವರಿಸಿದ್ದಾರೆ.
1.75 ಕೋಟಿ ರೂ. ಮೌಲ್ಯದ ಚಿನ್ನಾಭರಣ ಸೀಜ್-
ಮತ್ತೊಂದು ಪ್ರತ್ಯೇಕ ಕಾರ್ಯಾಚರಣೆಯಲ್ಲಿ, ಅಬುಧಾಬಿ ಹಾಗೂ ಕೌಲಾಲಂಪುರದಿಂದ ಕೆಐಎಗೆ ಆಗಮಿಸಿದ್ದ ಪ್ರಯಾಣಿಕರಿಂದ ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 1.75 ಕೋಟಿ ರೂಪಾಯಿ ಮೌಲ್ಯದ 1.2 ಕೆಜಿ ಅಕ್ರಮ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕಳ್ಳಸಾಗಣೆಯಲ್ಲಿ ತೊಡಗಿದ್ದ ಪ್ರಯಾಣಿಕರನ್ನು ಬಂಧಿಸಿ ಕಸ್ಟಮ್ಸ್ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ.
ನಿರಂತರ ಕಳ್ಳಸಾಗಣೆ ಜಾಲಕ್ಕೆ ಕಠಿಣ ಎಚ್ಚರಿಕೆ
ವಿಮಾನ ನಿಲ್ದಾಣದಲ್ಲಿ ಅಕ್ರಮ ಗಾಂಜಾ ಮತ್ತು ವಿದೇಶಿ ಪ್ರಾಣಿಗಳ ಸಾಗಾಟ ಹೊಸತೇನಲ್ಲ. ಕಳೆದ ಕೆಲ ತಿಂಗಳಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ವಿವಿಧ ಕಾರ್ಯಾಚರಣೆಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಹೈಡ್ರೋ ಗಾಂಜಾ ಜತೆಗೆ ಅಪರೂಪದ ಹಾವಿನ ತಳಿಗಳು, ಕಂಗಾರೂ ಹಾಗೂ ವಾನರ ಜಾತಿಯ ವನ್ಯಜೀವಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿದೇಶಗಳಿಂದ ನಡೆಯುತ್ತಿರುವ ಈ ಅಂತರರಾಷ್ಟ್ರೀಯ ಡ್ರಗ್ಸ್, ಚಿನ್ನ ಮತ್ತು ವನ್ಯಜೀವಿ ಕಳ್ಳಸಾಗಣೆ ಜಾಲಕ್ಕೆ ಕಸ್ಟಮ್ಸ್ ಇಲಾಖೆಯ ಈ ಕಾರ್ಯಾಚರಣೆಗಳು ದೊಡ್ಡ ಮಟ್ಟದಲ್ಲಿ ಬಿಸಿ ಮುಟ್ಟಿಸಿವೆ.




