ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತೆ, ಧರ್ಮ-ಧರ್ಮಗಳ ನಡುವೆ ವೈರತ್ವ ಉಂಟುಮಾಡುವ ರೀತಿಯಲ್ಲಿ ಪೋಸ್ಟ್ ಹಾಗೂ ಅಶ್ಲೀಲ ಕಾಮೆಂಟ್ ಹಾಕಿದವರ ವಿರುದ್ಧ ಚಿತ್ರದುರ್ಗ ಜಿಲ್ಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆಯ ವಿವರ: ದಿನಾಂಕ 12.10.2026 ರಂದು ಹಿರಿಯೂರು ನಗರದ ಕೆ.ಎಂ.ಕೊಟ್ಟಿಯಲ್ಲಿ ಸುಮಾರು 4 ವರ್ಷಗಳ ಹಿಂದೆ ಇಮ್ರಾನ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದ ಆಶಾ ಎಂಬುವವರು, ಗಂಡ ಹಾಗೂ ಆತನ ಮನೆಯವರ ವರದಕ್ಷಿಣೆ ಹಿಂಸೆ ತಾಳಲಾರದೆ ಮನೆಯಲ್ಲಿ ನೇಣುಹಾಕಿಕೊಂಡು ಮೃತಪಟ್ಟಿದ್ದರು. ಈ ಕುರಿತು ಆಶಾ ಅವರ ತಂದೆ ನಾಗರಾಜ ಅವರು ನೀಡಿದ ದೂರಿನನ್ವಯ ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.
11 ಖಾತೆಗಳ ವಿರುದ್ಧ ಎಫ್ಐಆರ್: ಈ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತೆ, ವಿವಿಧ ಧರ್ಮಗಳ ನಡುವೆ ವೈರತ್ವ ಮೂಡಿಸುವಂತೆ, ದೂರುದಾರರಿಗೆ ಮಾನಸಿಕ ನೋವುಂಟು ಮಾಡುವ ರೀತಿಯಲ್ಲಿ ಪೋಸ್ಟ್ ಮಾಡಿ ಅಶ್ಲೀಲ ಕಾಮೆಂಟ್ ಹಾಕಿದ್ದ ಸುಮಾರು 11 ಇನ್ಸ್ಟಾಗ್ರಾಮ್ ಖಾತೆ ಬಳಕೆದಾರರ ವಿರುದ್ಧ ದಿನಾಂಕ 15.10.2026 ರಂದು ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ (ಕ್ರ.ಸಂ: 256/2026, ಕಲಂ: 196(1)(a) BNS) ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಸಾರ್ವಜನಿಕರಿಗೆ ಪೊಲೀಸ್ ಸೂಚನೆ: ಸಾರ್ವಜನಿಕರು ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸಾಪ್, ಎಕ್ಸ್/ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ, ಯಾವುದೇ ಪೋಸ್ಟ್ ಹಾಗೂ ಕಾಮೆಂಟ್ ಮಾಡುವಾಗ ಸೂಕ್ತ ಎಚ್ಚರಿಕೆ ವಹಿಸಬೇಕೆಂದು ಚಿತ್ರದುರ್ಗ ಜಿಲ್ಲಾ ಪೊಲೀಸರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.




