ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲ್ಲೂಕಿನ ಸೂಗೂರು ಗ್ರಾಮದಲ್ಲಿ, ಹಿರಿಯೂರಿನ ತೋಟಗಾರಿಕಾ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿನಿಯರು ಗ್ರಾಮೀಣ ತೋಟಗಾರಿಕಾ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ 'ಹಸಿರಂಚು' ಮಾಹಿತಿ ಕೇಂದ್ರ ಹಾಗೂ ಪೌಷ್ಟಿಕ ತೋಟದ ಉದ್ಘಾಟನಾ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಯೋಜಿಸಿದರು.
ಅತಿಥಿಗಳ ಭವ್ಯ ಸ್ವಾಗತ: ಹೊಸಹಳ್ಳಿ, ಸೂಗೂರು ಹಾಗೂ ಮುಂಗಸವಳ್ಳಿ ಮೂರು ಗ್ರಾಮಗಳನ್ನು ಒಳಗೊಂಡ 'ಹಸಿರಂಚು' ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯ ಅತಿಥಿಗಳನ್ನು ಗ್ರಾಮದ ಪ್ರವೇಶದ್ವಾರದಿಂದ ಎತ್ತಿನಗಾಡಿ ಮತ್ತು ಟ್ರ್ಯಾಕ್ಟರ್‌ಗಳಲ್ಲಿ ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು. ಈ ವೇಳೆ ವಿದ್ಯಾರ್ಥಿನಿಯರ ಡೊಳ್ಳು ಬಾರಿಸುವ ಕಲಾಪ್ರದರ್ಶನ ಗಮನ ಸೆಳೆಯಿತು.
ಉದ್ಘಾಟನೆ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಡಾ. ಎಂ.ವಿ. ಧನಂಜಯ ಅವರು ಸೂಗೂರಿನಲ್ಲಿ 'ಹಸಿರಂಚು ಕೃಷಿ ಮಾಹಿತಿ ಕೇಂದ್ರ'ವನ್ನು ಮತ್ತು ಮುಂಗಸವಳ್ಳಿಯಲ್ಲಿ 'ಪೌಷ್ಟಿಕ ಕೈತೋಟ'ವನ್ನು ಉದ್ಘಾಟಿಸಿದರು.
ವಿಶೇಷ ಮಾಹಿತಿ: ಪ್ರತ್ಯೇಕ ಕುಟುಂಬಗಳಿಗೆ ತರಕಾರಿ ಗಿಡಗಳನ್ನು ಬೆಳೆಯುವ ವಿಧಾನ ಹಾಗೂ ಸಾವಯವ ಕೃಷಿ ಪದ್ಧತಿಯ ಕುರಿತು ಕುಲಪತಿಗಳು ತಿಳಿಸಿಕೊಟ್ಟರು.
ಅಲ್ಲದೆ, ಗ್ರಾಮೀಣ ಸಹಭಾಗಿತ್ವ ಮೌಲ್ಯಮಾಪನದ ಅಂಗವಾಗಿ ಗ್ರಾಮದ ನಕ್ಷೆ, ಕಾಲಗಣನೆ ಹಾಗೂ ಮಳೆ ನಕ್ಷತ್ರಗಳನ್ನು ಬಿಡಿಸಿ ಗ್ರಾಮಸ್ಥರಿಗೆ ಉಪಯುಕ್ತ ಮಾಹಿತಿ ನೀಡಲಾಯಿತು. ರೈತರು ವೈಜ್ಞಾನಿಕ ಮತ್ತು ತಾಂತ್ರಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.
ಮಾನೇಯುವ ಮಾಹಿತಿ ಕೇಂದ್ರದ ಪ್ರಯೋಜನಗಳು: ಈ ಮಾಹಿತಿ ಕೇಂದ್ರದ ಮೂಲಕ ರೈತರು ಈ ಕೆಳಗಿನ ಪ್ರಮುಖ ವಿಷಯಗಳ ಕುರಿತು ಮಾಹಿತಿ ಪಡೆದುಕೊಂಡರು.
ಕೃಷಿ ಮತ್ತು ಹವಾಮಾನ: ನಿಖರವಾದ ಹವಾಮಾನ ಮುನ್ಸೂಚನೆ, ಮಣ್ಣು ಪರೀಕ್ಷೆ ಮತ್ತು ಬೆಳೆ ರೋಗಗಳ ನಿಯಂತ್ರಣ ಸಲಹೆಗಳು.
ಸರ್ಕಾರಿ ಯೋಜನೆಗಳು: ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳು ಮತ್ತು ಮಾರುಕಟ್ಟೆ ಮಾಹಿತಿ.
ಸುಧಾರಿತ ಕೃಷಿ ಪದ್ಧತಿಗಳು: ಸಮಗ್ರ ಕೃಷಿ ಪದ್ಧತಿ, ಮಳೆನೀರು ಕೊಯ್ಲು, ಸಾವಯವ ಕೃಷಿ ಹಾಗೂ ಅಣಬೆ ಕೃಷಿ.
ಕಾರ್ಯಕ್ರಮದಲ್ಲಿ ಗ್ರಾಮೀಣ ತೋಟಗಾರಿಕಾ ಕಾರ್ಯಾನುಭವ ಕಾರ್ಯಕ್ರಮದ ಸಂಯೋಜಕರಾದ ಡಾ. ಕುಮಾರ ಓ ಪ್ರಾಸ್ತಾವಿಕ ನುಡಿ ನುಡಿದರು. ಕಾಲೇಜಿನ ಮುಖ್ಯಸ್ಥರು ಹಾಗೂ ಡೀನ್ ಡಾ. ತಿಪ್ಪೇಶ ಡಿ ಅಧ್ಯಕ್ಷತೆ ವಹಿಸಿದ್ದರು.
ಸಂಶೋಧನಾ ನಿರ್ದೇಶಕ ಡಾ. ಶ್ರೀಧರ್, ಸಹ ಸಂಶೋಧನಾ ನಿರ್ದೇಶಕ ಡಾ. ಧನಂಜಯ, ಸಹ ಸಂಯೋಜಕ ಡಾ. ನಾಗರಾಜ ಕುಸಗೂರ್, ಡಾ. ರಾಜಶೇಖರ್ ಬಾರ್ಕರ್, ಡಾ. ಮಹಾಲಕ್ಷ್ಮಿ, ವಿಜ್ಞಾನಿಗಳಾದ ಡಾ. ಹನುಮಂತರಾಯ, ಡಾ. ಕುಮಾರ್ ನಾಯ್ಕ್, ಡಾ. ಜಯಪ್ರಕಾಶ್, ಸುರೇಶ ಡಿ. ಏಕಬೋಟೆ, ಡಾ. ಇಮ್ರಾನ್ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು. ಮೂರು ಗ್ರಾಮಗಳ ರೈತ ಬಾಂಧವರು, ಗ್ರಾಮಸ್ಥರು ಮತ್ತು ಪುಟಾಣಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.




