ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಭಾರತದ ರೈತರ ಕಲ್ಯಾಣ ಹಾಗೂ ರಬಿ ಹಂಗಾಮಿನ ದೃಷ್ಟಿಯಿಂದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, 2027-28ರ ಮಾರುಕಟ್ಟೆ ಹಂಗಾಮಿಗೆ ಸಂಬಂಧಿಸಿದಂತೆ ಎಲ್ಲಾ ಆರು ರಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (MSP) ಹೆಚ್ಚಿಸಿ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅನುಮೋದಿತ ನೂತನ ದರಗಳ ಪ್ರಕಾರ, ಕುಸುಬೆ ಬೆಳೆಗೆ ಕ್ವಿಂಟಾಲ್‌ಗೆ ₹675 ಹೆಚ್ಚಳದೊಂದಿಗೆ ₹7,215, ಸಾಸಿವೆಗೆ ₹413 ಹೆಚ್ಚಳದೊಂದಿಗೆ ₹6,613, ಮಸೂರ ಬೇಳೆಗೆ ₹390 ಹೆಚ್ಚಳದೊಂದಿಗೆ ₹7,390, ಬಾರ್ಲಿಗೆ ₹136 ಹೆಚ್ಚಳದೊಂದಿಗೆ ₹2,286, ಕಡಲೆಗೆ ₹83 ಹೆಚ್ಚಳದೊಂದಿಗೆ ₹5,958 ಹಾಗೂ ಗೋಧಿಗೆ ₹25 ಹೆಚ್ಚಳದೊಂದಿಗೆ ₹2,610 ನಿಗದಿಪಡಿಸಲಾಗಿದೆ.
ಈ ಕುರಿತು ವಿವರಣೆ ನೀಡಿರುವ ಸಚಿವರು, ಪರಿಷ್ಕೃತ MSP ದರಗಳು ದೇಶಾದ್ಯಂತ ಸರಾಸರಿ ಉತ್ಪಾದನಾ ವೆಚ್ಚದ ಮೇಲೆ ಶೇ. 50 ರಿಂದ ಶೇ. 106 ರಷ್ಟು ಲಾಭಾಂಶವನ್ನು ರೈತರಿಗೆ ಒದಗಿಸಲಿವೆ ಎಂದಿದ್ದಾರೆ.
ಕಳೆದ ದಶಕದ ಸಾಧನೆಗಳನ್ನು ಉಲ್ಲೇಖಿಸಿ, 2004-05 ರಿಂದ 2013-14ರ ಅವಧಿಯಲ್ಲಿ 2,302 ಲಕ್ಷ ಮೆಟ್ರಿಕ್ ಟನ್ ಇದ್ದ ರಬಿ ಬೆಳೆಗಳ ಖರೀದಿ ಪ್ರಮಾಣವು, 2014-15 ರಿಂದ 2025-26ರ ಅವಧಿಯಲ್ಲಿ 3,921 ಲಕ್ಷ ಮೆಟ್ರಿಕ್ ಟನ್‌ಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ರೈತರಿಗೆ ಪಾವತಿಸಲಾದ ಬೆಂಬಲ ಬೆಲೆಯ ಮೊತ್ತವು ₹2.65 ಲಕ್ಷ ಕೋಟಿಯಿಂದ ₹8.36 ಲಕ್ಷ ಕೋಟಿಗೆ ಭಾರಿ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ.
ಕೇಂದ್ರ ಸರ್ಕಾರದ ಈ ದೃಢವಾದ ಕ್ರಮಗಳು ರೈತರಿಗೆ ಉತ್ತಮ ಆದಾಯ ತಂದುಕೊಡುವುದರ ಜೊತೆಗೆ, ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳ ಬೆಳೆ ವೈವಿಧ್ಯೀಕರಣಕ್ಕೆ ಹೆಚ್ಚಿನ ಉತ್ತೇಜನ ನೀಡಲಿವೆ ಎಂದು ಹೆಚ್.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.




