ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದಾದ್ಯಂತ ಆರೋಗ್ಯ ಸೇವೆಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿಗಳು ತಮ್ಮ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ಮುಂದುವರಿದಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ರಾಜ್ಯದ ಆರೋಗ್ಯ ಉಪಕೇಂದ್ರಗಳನ್ನು 'ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನಾಗಿ' ಮೇಲ್ದರ್ಜೆಗೇರಿಸಿ, ಅವುಗಳ ನಿರ್ವಹಣೆಗಾಗಿ ಸಿಹೆಚ್ಒಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಆದರೆ, ಇವರ ಸೇವಾ ಭದ್ರತೆ, ಭವಿಷ್ಯ ಹಾಗೂ ಹಕ್ಕುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಪ್ರತಿಭಟನಾಕಾರರು ತೀವ್ರವಾಗಿ ಆರೋಪಿಸಿದ್ದಾರೆ.
ಹೋರಾಟದ ಹಿನ್ನೆಲೆ: ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಹಲವು ಬಾರಿ ಮನವಿ ಸಲ್ಲಿಸಿದರೂ ಸರ್ಕಾರದಿಂದ ಯಾವುದೇ ಸ್ಪಷ್ಟ ಭರವಸೆ ಸಿಗದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ CHOಗಳು ಉಗ್ರ ಹೋರಾಟಕ್ಕೆ ಮುಂದಾಗಿದ್ದಾರೆ. ಇದರ ಭಾಗವಾಗಿ ಸೆಪ್ಟೆಂಬರ್ 28 ರಂದು ರಾಜ್ಯದ ವಿವಿಧಡೆಯಿಂದ ಆಗಮಿಸಿದ್ದ ಸುಮಾರು 2,500ಕ್ಕೂ ಅಧಿಕ CHOಗಳು ತುಮಕೂರಿನ ಸಿದ್ಧಗಂಗಾ ಮಠದಿಂದ ನೆಲಮಂಗಲದವರೆಗೆ ಬೃಹತ್ ಕಾಲ್ನಡಿಗೆ ಜಾಥಾ ನಡೆಸಿದರು. ಬಳಿಕ ಸೆಪ್ಟೆಂಬರ್ 29 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.
ಪ್ರಮುಖ ಬೇಡಿಕೆಗಳು:
ಉದ್ಯೋಗ ಖಾಯಮಾತಿ: ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ CHOಗಳಿಗೆ ಕೂಡಲೇ ಉದ್ಯೋಗ ಖಾಯಮಾತಿ ಹಾಗೂ ಭದ್ರತೆ ಕಲ್ಪಿಸಬೇಕು.
ಅರ್ಹತೆ ಸಡಿಲಿಕೆ: PHCO (ANM) ಮತ್ತು HIO ಹುದ್ದೆಗಳಿಗೆ B.Sc Nursing ಅರ್ಹತೆಯನ್ನು ಕಡ್ಡಾಯಗೊಳಿಸಿರುವುದನ್ನು ತಕ್ಷಣ ಹಿಂಪಡೆಯಬೇಕು.
ಸ್ಥಳಾಂತರ ಪ್ರಕ್ರಿಯೆ ಸ್ಥಗಿತ: ಪ್ರಸ್ತುತ ಜಾರಿಯಲ್ಲಿರುವ CHO Relocation ಪ್ರಕ್ರಿಯೆಯನ್ನು ಮುಂದೂಡಬೇಕು.
ವರ್ಗಾವಣೆ ಸೌಲಭ್ಯ: ಸಿಬ್ಬಂದಿಗೆ ಅನುಕೂಲವಾಗುವಂತೆ ಅಂತರ ಜಿಲ್ಲಾ ವರ್ಗಾವಣೆ ಸೌಲಭ್ಯವನ್ನು ಕಲ್ಪಿಸಬೇಕು.
ವೇತನ ಪರಿಷ್ಕರಣೆ: CHOಗಳ TOR (Terms of Reference) ಪರಿಷ್ಕರಿಸುವುದರ ಜೊತೆಗೆ ವೇತನ ಹಾಗೂ ಗೌರವಧನವನ್ನು ಹೆಚ್ಚಿಸಬೇಕು.
ಕಾರ್ಯ ವ್ಯಾಪ್ತಿ: ಅಧಿಕಾರಿಗಳನ್ನು ಕೇವಲ ಸಮುದಾಯ ಆರೋಗ್ಯ ಸೇವೆಗಳಿಗೆ ಮಾತ್ರ ಸಮರ್ಪಕವಾಗಿ ಬಳಸಿಕೊಳ್ಳಬೇಕು.
ದಕ್ಷಿಣ ಕನ್ನಡ ಜಿಲ್ಲೆಯ ಭಾಗವಹಿಸುವಿಕೆ: ರಾಜ್ಯವ್ಯಾಪಿ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಿಬ್ಬಂದಿಗಳೂ ಕೂಡ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಪುತ್ತೂರು ತಾಲೂಕಿನಲ್ಲಿ 46 ಮಂದಿ ಸೇರಿದಂತೆ ಒಟ್ಟು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 276 ಸಮುದಾಯ ಆರೋಗ್ಯ ಅಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ NHM ಗುತ್ತಿಗೆ ನೌಕರರ ಸಂಘದ ಜಿಲ್ಲಾ ಸಂಘದ ಕಾರ್ಯದರ್ಶಿ ಯಶೋಧರ ತಿಳಿಸಿದ್ದಾರೆ.
ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸಮುದಾಯ ಆರೋಗ್ಯ ಅಧಿಕಾರಿಗಳ ಪ್ರಮುಖ ಬೇಡಿಕೆಗಳ ಕುರಿತು ಸಕಾರಾತ್ಮಕ ಸ್ಪಂದನೆ ನೀಡಬೇಕು ಹಾಗೂ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು ಎಂದು ಸಂಘದ ಮುಖಂಡರು ಬಲವಾಗಿ ಒತ್ತಾಯಿಸಿದ್ದಾರೆ.




