ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮಾನವನಾಗಿ ಹುಟ್ಟಿ ಮಾನವನಾಗಿ ಬಾಳುವುದಕ್ಕಿಂತ ಮಹಾ ಮಾನವನಾಗಿ ಬಾಳುವುದು ಜೀವನದ ಸಾರ್ಥಕ್ಯವೆನಿಸುತ್ತದೆ. ಹಾಗಾಗಿ ನಾವೆಲ್ಲರೂ ಸಾರ್ಥಕ ಜೀವನ ನಡೆಸಲು ಪ್ರಯತ್ನಿಸಬೇಕು ಎಂದು ಪುಷ್ಪಾoಡಜ ಮಹರ್ಷಿ ಆಶ್ರಮದ ಪೀಠಾಧಿಪತಿಗಳದ ಶ್ರೀ ದಿವ್ಯ ಜ್ಞಾನಾನಂದ ಗಿರಿ ಸ್ವಾಮೀಜಿಗಳು ಹೇಳಿದರು.
ತಪಸಿಹಳ್ಳಿ ಶ್ರೀಪುಷ್ಪಾoಡಜ ಮಹರ್ಷಿ ಆಶ್ರಮದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು ಮನುಷ್ಯ ನೇಕಾರ ನೇಯುವ ಬಟ್ಟೆಯoತಿರಬೇಕು. ನೂಲಿನ ಎಳೆಗಳು ಒಟ್ಟಾಗಿದ್ದರೆ ವಸ್ತ್ರ ಅಥವಾ ಸೀರೆ ಗುಣಮಟ್ಟ ಉತ್ತಮವಾಗಿರುತ್ತದೆ. ಅದೇ ನೂಲಿನ ಎಳೆಗಳು ಬಿಡಿಯಾಗಿದ್ದರೆ ವಸ್ತ್ರ ಜಾಳು ಜಾಳಾಗಿ ಗುಣಮಟ್ಟ ಕಳಪೆಯಾಗುತ್ತದೆ. ಹಾಗೆಯೇ ನಮ್ಮ ಜೀವನವು ಸೀರೆಯ ತರಹ ಇದ್ದಂತೆ. ನಾವು ಆದ್ಯಾತ್ಮಿಕವಾಗಿ ಸಂಸ್ಕಾರ ಕಲಿತರೆ ಜೀವನ ಸುಂದರ ಹಾಗೂ ಪರಿಪೂರ್ಣವಾಗಿರುತ್ತದೆ.ಚೌಡೇಶ್ವರಿ ದೇವಿಯ ಆರಾಧಕರಾದ ತೊಗಟ ವೀರ ಸಮಾಜ ವಿಶ್ವಕ್ಕೆ ವಸ್ತ್ರ ನೇಯ್ದು ಕೊಡುವ ಸಮಾಜವಾಗಿದ್ದು ತೀರಾ ಅಲ್ಪ ಸಂಖ್ಯಾತ ಸಮಾಜವಾಗಿದೆ. ಬೇರೆ ಮುಂದುವರೆದ ಸಮಾಜಗಳಂತೆ ತೊಗಟ ವೀರ ಕ್ಷತ್ರಿಯ ಸಮಾಜವು ಸಹಾ ಎಲ್ಲಾ ರಂಗಗಳಲ್ಲೂ ಮುಂದೆ ಬರಬೇಕಿದೆ. ತಾವು ಆರ್ಥಿಕವಾಗಿ ಸಾಮಾಜಿಕವಾಗಿ ಧಾರ್ಮಿಕವಾಗಿ ಉನ್ನತಿ ಹೊಂದುವುದಲ್ಲದೆ ಸಮಾಜದ ಪ್ರಗತಿಗೆ ಕಾರಣರಾಗಬೇಕಿದೆ. ಹಾಗಾಗಿ ಪುಷ್ಪಾoಡಜ ಮಹರ್ಷಿ ಆಶ್ರಮ ತೊಗಟ ವೀರ ಸಮುದಾಯದ ಜೊತೆಗೆ ಸಮಾಜದ ಎಲ್ಲಾ ವರ್ಗಗಳ ಏಳಿಗೆಗಾಗಿ ಶ್ರಮಿಸುತ್ತಿದೆ. ಆಶ್ರಮದ ಕಾರ್ಯಕ್ಕೆ ತಾವೆಲ್ಲರೂ ಕೈ ಜೋಡಿಸಬೇಕಿದೆ.ಇಂದು ಪ್ರತಿಭಾ ಪುರಸ್ಕಾರ ಸ್ವೀಕರಿಸಲು ಬಂದಿರುವ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡಿ ಉನ್ನತ ಸ್ಥಾನಗಳನ್ನು ಹೊಂದಿ ತಾಯಿ ತಂದೆಗಳ ಪರಿಶ್ರಮಕ್ಕೆ ಹಾಗೂ ಅವರ ಆಶಯಗಳಿಗೆ ಪೂರಕವಾಗಿ ನಿಲ್ಲಬೇಕಿದೆ. ಬಹು ಮುಖ್ಯವಾಗಿ ಸಂಸ್ಕಾರವಂತರಾಗಿ ಬಾಳಿ ಸಮುದಾಯದ ಬಡ ವರ್ಗಗಳ ನೆರವಿಗೆ ನಿಲ್ಲಬೇಕಿದೆ. ಹೀಗಾದಾಗ ಮಾತ್ರ ವಿದ್ಯಾರ್ಥಿಗಳು ಪಡೆದ ಶಿಕ್ಷಣಕ್ಕೆ ಅರ್ಥಪೂರ್ಣವೆನಿಸುತ್ತದೆ ಎಂದು ಹೇಳಿದರು.
ಮಾಜಿ ಸಚಿವ ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ ಮಾತನಾಡಿ ತೊಗಟ ವೀರ ಸಮುದಾಯ ನೇಕಾರಿಕೆ ವೃತ್ತಿಯನ್ನು ಅವಲಂಬಿಸಿರುವ ಸಮುದಾಯವಾಗಿದ್ದು ಆರ್ಥಿಕವಾಗಿ ಹಿಂದುಳಿದ ಹಾಗೂ ಅಲ್ಪ ಸಂಖ್ಯಾತ ಸಮುದಾಯವಾಗಿದೆ. ಜಗತ್ತಿಗೆ ವಸ್ತ್ರ ನೇಯ್ದು ಕೊಡುವ ಸಮಾಜ ಎಲ್ಲಾ ಸಮುದಾಯಗಳಂತೆ ಆರ್ಥಿಕವಾಗಿ ಮುಂದೆ ಬರಬೇಕಿದೆ. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ತೊಗಟ ವೀರ ಕ್ಷತ್ರಿಯ ಸಮುದಾಯ ನಿರ್ಣಾಯಕ ಸಂಖ್ಯೆಯಲ್ಲಿದ್ದು ನಾನು ರಾಜಕಾರಣದಲ್ಲಿ ಮುಂದೆ ಬರಲು ಸಾಕಷ್ಟು ಸಹಕಾರ ನೀಡಿದೆ. ಮುಂದೆಯೂ ನೀಡುತ್ತದೆ. ಹೀಗಾಗಿ ಸಮುದಾಯದ ಹಲವು ಕಾರ್ಯಗಳಿಗೆ ನನ್ನ ಕೈಲಾದ ಮಟ್ಟಿಗೆ ಸ್ಪಂದಿಸಿದ್ದೇನೆ. ನಮ್ಮ ಕ್ಷೇತ್ರದ ಹಲವು ಕಾರ್ಯಕ್ರಮಗಳಿಗೆ ತೊಗಟ ವೀರ ಸಮಾಜ ನೇಯ್ದ ಸೀರೆಗಳನ್ನೇ ಹೆಚ್ಚಾಗಿ ಬಳಸುತ್ತಿದ್ದೇವೆ. ತಾವು ನೇಯ್ದ ಸೀರೆಗಳಿಗೆ ಹೆಚ್ಚು ಬೆಲೆ ಸಿಕ್ಕಾಗ ಮಾತ್ರ ತೊಗಟ ವೀರರು ಮುಂದೆ ಬರಲು ಸಾಧ್ಯ. ಬಹು ಮುಖ್ಯವಾಗಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಹೊಂದಿ ಆರ್ಥಿಕವಾಗಿ ಸದೃಢವಾಗಬೇಕಿದೆ. ತೊಗಟ ವೀರ ಕ್ಷತ್ರಿಯ ಸಮುದಾಯದ ಜೊತೆ ಅತಿ ಹೆಚ್ಚು ಒಡನಾಟ ಹೊಂದಿರುವ ನನ್ನ ರಾಜಕೀಯ ಪ್ರಗತಿಗೆ ಕಾರಣರಾದ ಈ ಸಮುದಾಯದ ಏಳಿಗೆಗೆ ಸದಾ ಸಿದ್ದನಿದ್ದೇನೆ. ಪ್ರಸ್ತುತ ಪುಷ್ಪಾoಡಜ ಆಶ್ರಮದ ಅಭಿವೃದ್ಧಿ ಗಾಗಿ ನನ್ನ ಶಾಸಕ ನಿದಿಯಿಂದ ಅನುದಾನ ಕೊಡಲು ಸಾಧ್ಯವಿಲ್ಲ. ವಯುಕ್ತಿಕವಾಗಿ ಐದು ಲಕ್ಷ ರೂಗಳನ್ನು ನೀಡುವುದರ ಮೂಲಕ ತೊಗಟ ವೀರ ಸಮುದಾಯದ ಅಭಿವೃದ್ಧಿಯಲ್ಲಿ ನನ್ನದು ಒಂದು ಅಳಿಲು ಸೇವೆ ಇರಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು.
ಯಲಹಂಕ ಶಾಸಕ ವಿಶ್ವನಾಥ್ ಮಾತನಾಡಿ ತೊಗಟ ವೀರ ಸಮಾಜ ಅಲ್ಪ ಸಂಖ್ಯಾತ ಸಮಾಜವಾಗಿದ್ದು ಅಭಿವೃದ್ಧಿ ಹೊಂದಿದ ಬೇರೆ ಸಮುದಾಯಗಳಂತೆ ಮುಂದೆ ಬರಬೇಕಿದೆ. ನೇಕಾರಿಕೆ ಯನ್ನು ವೃತ್ತಿಯನ್ನಾಗಿ ಹೊಂದಿರುವ ಈ ಸಮಾಜ ಒಂದರ್ಥದಲ್ಲಿ ಆರ್ಥಿಕವಾಗಿ ಹಿಂದುಳಿದಿದೆ. ನೇಕಾರಿಕೆ ವ್ಯವಹಾರದ ಏರಿಳಿತಗಳು ಇದಕ್ಕೆ ಪ್ರಮುಖ ಕಾರಣ ವೆನ್ನಬಹುದು. ನನ್ನ ಕ್ಷೇತ್ರದಲ್ಲಿ ಅಧಿಕ ಸಂಖ್ಯೆ ಯಲ್ಲಿರುವ ಸಮಾಜ ಸದಾ ನನ್ನ ಪರವಾಗಿ ನಿಲ್ಲುತ್ತ ಬಂದಿದೆ. ಇದಕ್ಕಾಗಿ ತೊಗಟ ವೀರ ಸಮಾಜದ ಬಗ್ಗೆ ಅತ್ಯಂತ ಪ್ರೀತಿ ಪೂರ್ವಕವಾದ ಗೌರವವನ್ನು ಹೊಂದಿದ್ದೇನೆ. ಜೊತೆಗೆ ಸಮುದಾಯದ ಎಲ್ಲಾ ಕಾರ್ಯಗಳಲ್ಲೂ ಕೈ ಜೋಡಿಸಿದ್ದೇನೆ. ನನ್ನನ್ನು ಬೆಳೆಸಿದ ಸಮಾಜವನ್ನು ನಾನೂ ಕೂಡಾ ಬೆಳೆಸಬೇಕಾಗಿರುವುದು ನನ್ನ ಕರ್ತವ್ಯ. ಹಾಗಾಗಿ ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದ್ದೇನೆ. ದಿವ್ಯ ಜ್ಞಾನನಂದ ಗಿರಿ ಸ್ವಾಮಿಗಳ ಒಡನಾಟ ನನಗೆ ಹಳೆಯದು. ಆಶ್ರಮಕ್ಕೆ ಹಲವಾರು ಬಾರಿ ಬೇಟಿ ಕೊಟ್ಟು ಶ್ರೀಗಳ ಆಶೀರ್ವಾದ ಪಡೆದಿದ್ದೇನೆ. ಸಮುದಾಯದ ಕೋರಿಕೆಯಂತೆ ಪುಷ್ಪಾoಡಜ ಮಹರ್ಷಿ ಆಶ್ರಮದ ಅಭಿವೃದ್ಧಿಗಾಗಿ ಸುಮಾರು ಇಪ್ಪತ್ತು ಲಕ್ಷ ರೂಗಳನ್ನು ದೇಣಿಗೆಯನ್ನು ಕೊಟ್ಟು ಆಶ್ರಮದ ಹಾಗೂ ಸಮುದಾಯದ ಪ್ರಗತಿಗೆ ಕೈ ಜೋಡಿಸಲು ಬದ್ಧನಾಗಿದ್ದೇನೆ ಎಂದು ಹೇಳಿದರು.
ಎಸ್. ಎಸ್. ಎಲ್. ಸಿ. ಹಾಗೂ ಪಿ ಯು ಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದು ಉತ್ತೀರ್ಣ ರಾದ ಸಮುದಾಯದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಜಿಲ್ಲಾ ಉಸ್ತುವಾರಿ ಮಂತ್ರಿ ಕೆ. ಹೆಚ್. ಮುನಿಯಪ್ಪ, ತೆಲಂಗಾಣ, ಆಂಧ್ರ ಹಾಗೂ ತಮಿಳು ನಾಡಿನ ಜನಪ್ರತಿನಿದಿಗಳು, ಕೇಂದ್ರ ರೇಷ್ಮೆ ಮಂಡಲಿ ಮಾಜಿ ಅಧ್ಯಕ್ಷರಾದ ಕೆ. ಎಂ. ಹನುಮಂತರಾಯಪ್ಪ ಸೇರಿದಂತೆ ತೊಗಟ ವೀರ ಕ್ಷತ್ರಿಯ ಸಮುದಾಯದ ಮುಖಂಡರು, ಬಂದುಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.



