ಚಂದ್ರವಳ್ಳಿ ನ್ಯೂಸ್, ಬೆಂಗಳೂರು
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಕೊಪ್ಪಳದ ಗವಿಮಠದ ಪರಮಪೂಜ್ಯ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಅವರೇ ಉದ್ಘಾಟಿಸುವುದು ನಿಶ್ಚಿತವಾಗಿದ್ದು, ಈ ಕುರಿತು ಯಾವುದೇ ರೀತಿಯ ಗೊಂದಲಗಳಿಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸ್ಪಷ್ಟಪಡಿಸಿದ್ದಾರೆ.
ಗವಿಸಿದ್ದೇಶ್ವರ ಶ್ರೀಗಳು ದಸರಾ ಉದ್ಘಾಟನೆಯ ಆಹ್ವಾನವನ್ನು ತಿರಸ್ಕರಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳು ಹಾಗೂ ಆಧಾರರಹಿತವಾಗಿವೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶ್ರೀಗಳೊಂದಿಗೆ ಮಾತುಕತೆ ನಡೆಸಿದ ಬಳಿಕವೇ, ಸೆಪ್ಟೆಂಬರ್ 24ರಂದು ವಿಧಾನಸಭೆಯಲ್ಲಿ ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸೆ.28ರಂದು ಅಧಿಕೃತ ಆಹ್ವಾನ: ಸರ್ಕಾರ ಈಗಾಗಲೇ ಗವಿಮಠದೊಂದಿಗೆ ಸಂಪರ್ಕದಲ್ಲಿದ್ದು, ಸೆಪ್ಟೆಂಬರ್ 28ರಂದು ಖುದ್ದು ಗವಿಮಠಕ್ಕೆ ಭೇಟಿ ನೀಡಿ ಪೂಜ್ಯ ಶ್ರೀಗಳಿಗೆ ಅಧಿಕೃತವಾಗಿ ಆಹ್ವಾನ ನೀಡಲು ದಿನಾಂಕ ನಿಗದಿಯಾಗಿದೆ.
ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ: ಮುಖ್ಯಮಂತ್ರಿಗಳ ಅಧಿಕೃತ ಘೋಷಣೆಯ ನಂತರವೂ ಶ್ರೀಗಳು ಆಹ್ವಾನ ನಿರಾಕರಿಸಿದ್ದಾರೆ ಎಂದು ಕೆಲವರು ಸುಳ್ಳು ಸುದ್ದಿ ಹರಡಿ ಜನರಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ.
ಕಾನೂನು ಕ್ರಮದ ಎಚ್ಚರಿಕೆ: ನಾಡಹಬ್ಬ ಮೈಸೂರು ದಸರಾ ಕುರಿತು ಆಧಾರರಹಿತ ಹಾಗೂ ಸುಳ್ಳು ಮಾಹಿತಿ ಹರಡುವವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು.
ದಸರಾ ಉದ್ಘಾಟನೆ ಸೇರಿದಂತೆ ಯಾವುದೇ ಮಾಹಿತಿಗಾಗಿ ಸಾರ್ವಜನಿಕರು ಸರ್ಕಾರದ ಅಧಿಕೃತ ಪ್ರಕಟಣೆಗಳನ್ನೇ ಪರಿಗಣಿಸಬೇಕೆಂದು ಸಚಿವರು ಮನವಿ ಮಾಡಿದ್ದಾರೆ.




