ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಬೆಳಗಾವಿ ಸೇರಿದಂತೆ ಕರ್ನಾಟಕದ ಗಡಿ ಪ್ರದೇಶಗಳ ಮೇಲಿನ ತನ್ನ ಹಕ್ಕನ್ನು ಪ್ರತಿಪಾದಿಸಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿರುವ ದಶಕಗಳಷ್ಟು ಹಳೆಯ ಅರ್ಜಿಯ ವಿಚಾರಣೆಯನ್ನು ತ್ವರಿತವಾಗಿ ನಡೆಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಾಗಿದೆ. ಆದರೆ, ಸದ್ಯಕ್ಕೆ ವಿಚಾರಣೆಯ ಖಚಿತ ದಿನಾಂಕ ನೀಡಲು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠ ಸ್ಪಷ್ಟವಾಗಿ ನಿರಾಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಹಾಗೂ ವಿ. ಮೋಹನಾ ಅವರನ್ನೊಳಗೊಂಡ ತ್ರಿಪೀಠದ ಮುಂದೆ ಮಹಾರಾಷ್ಟ್ರದ ಪರ ವಕೀಲರು ಈ ವಿಷಯವನ್ನು ತುರ್ತಾಗಿ ಪ್ರಸ್ತಾಪಿಸಿದರು.
ಮಹಾರಾಷ್ಟ್ರದ ವಾದ: 2004ರಲ್ಲಿ ಸಲ್ಲಿಸಲಾದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ರಾಜ್ಯಗಳ ವಾದ ಮತ್ತು ದಾಖಲೆಗಳ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಭಾಷಾವಾರು ಆಧಾರದ ಮೇಲೆ ರಾಜ್ಯಗಳ ಪುನರ್‌ರಚನೆಯಾಗಿದ್ದರೂ, 865 ಮರಾಠಿ ಭಾಷಿಕ ಗ್ರಾಮಗಳು ಹಾಗೂ ಬೆಳಗಾವಿ, ಕಾರವಾರ, ನಿಪ್ಪಾಣಿಯಂತಹ ನಗರಗಳು ಕರ್ನಾಟಕದ ಆಡಳಿತದಲ್ಲಿ ಉಳಿದುಕೊಂಡಿವೆ. ಹೀಗಾಗಿ ವಿಚಾರಣೆಯನ್ನು ತಕ್ಷಣ ಕೈಗೆತ್ತಿಕೊಳ್ಳಬೇಕು ಎಂದು ಮಹಾರಾಷ್ಟ್ರ ವಾದಿಸಿತು.
ಸುಪ್ರೀಂ ಕೋರ್ಟ್ ಪ್ರತಿಕ್ರಿಯೆ: ಮಹಾರಾಷ್ಟ್ರ ಸರ್ಕಾರದ ಮನವಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, "ಪ್ರಕರಣವನ್ನು ಪರಿಶೀಲಿಸಲಾಗುವುದು. ಆದರೆ, ತಕ್ಷಣವೇ ವಿಚಾರಣೆಗೆ ದಿನಾಂಕ ನಿಗದಿಪಡಿಸಿ ಪಟ್ಟಿ ಮಾಡಲಾಗುವುದು ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ," ಎಂದು ಸ್ಪಷ್ಟಪಡಿಸಿದರು.
ಪ್ರಕರಣದ ಹಿನ್ನೆಲೆ: 1956ರ ರಾಜ್ಯ ಪುನರ್‌ರಚನಾ ಕಾಯ್ದೆಯಡಿ ಕನ್ನಡ ಭಾಷಿಕರ ಬಹುಮತದ ಆಧಾರದ ಮೇಲೆ ಬೆಳಗಾವಿ ಸೇರಿದಂತೆ ಹಲವು ಭಾಗಗಳನ್ನು ಅಂದಿನ ಮೈಸೂರು ರಾಜ್ಯಕ್ಕೆ (ಈಗಿನ ಕರ್ನಾಟಕ) ಸೇರಿಸಲಾಗಿತ್ತು. 1956ರ ಈ ಕಾಯ್ದೆಯ ನಿಬಂಧನೆಗಳು ಹಾಗೂ ಕರ್ನಾಟಕದ ನಿಯಂತ್ರಣವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಮೂಲ ಮೊಕದ್ದಮೆ ಹೂಡಿತ್ತು.




