ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕೃಷಿಯ ಮಹತ್ವವನ್ನು ಗ್ರಾಮೀಣ ಜನತೆಗೆ ಹಾಗೂ ರೈತರಿಗೆ ಸಾರುವ ಮತ್ತು ತೋಟಗಾರಿಕಾ ತಂತ್ರಜ್ಞಾನವನ್ನು ಮನೆಮನೆಗೆ ತಲುಪಿಸುವ ಸದುದ್ದೇಶದಿಂದ, ಹಿರಿಯೂರು ತೋಟಗಾರಿಕೆ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು “ಗ್ರಾಮೀಣ ತೋಟಗಾರಿಕಾ ಕಾರ್ಯಾನುಭವ ಕಾರ್ಯಕ್ರಮ (RHWEP)”ದಡಿ ಗೂಳ್ಯ ಗ್ರಾಮದಲ್ಲಿ “ಕೃಷಿ ಸಾರಥಿ” ಮಾಹಿತಿ ಕೇಂದ್ರ ಹಾಗೂ ಪೌಷ್ಟಿಕ ತೋಟವನ್ನು ಅತ್ಯಂತ ಯಶಸ್ವಿಯಾಗಿ ಉದ್ಘಾಟಿಸಿದರು.
ಆಕರ್ಷಕ ಮೆರವಣಿಗೆ: ಸಾಂಪ್ರದಾಯಿಕ ಎತ್ತಿನ ಬಂಡಿ ಹಾಗೂ ಟ್ರ್ಯಾಕ್ಟರ್ಗಳ ಅದ್ದೂರಿ ಮೆರವಣಿಗೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದು ಗ್ರಾಮಸ್ಥರು ಹಾಗೂ ರೈತರ ಗಮನ ಸೆಳೆದು, ಕೃಷಿ ಸಂಸ್ಕೃತಿಯ ಸಂಭ್ರಮವನ್ನು ಸಾರಿತು.
ಮಾಹಿತಿ ಕೇಂದ್ರದ ಉದ್ಘಾಟನೆ: ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಹಾಗೂ ಆವರಣದ ಮುಖ್ಯಸ್ಥರಾದ ಡಾ. ತಿಪ್ಪೇಶ. ಡಿ. ಹಾಗೂ RHWEP ಸಂಯೋಜಕರಾದ ಡಾ. ಕುಮಾರ ಓ. ಅವರು ಉಪಸ್ಥಿತರಿದ್ದು, ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನ, ಕೀಟ ಹಾಗೂ ರೋಗ ನಿಯಂತ್ರಣ ಕುರಿತು ಮಾರ್ಗದರ್ಶನ ನೀಡಿದರು.
ನ್ಯೂಟ್ರಿ ಗಾರ್ಡನ್ (ಪೌಷ್ಟಿಕ ತೋಟ): ಮನೆಯ ಸುತ್ತಮುತ್ತಲಿನ ಖಾಲಿ ಜಾಗವನ್ನು ಬಳಸಿ ಸಾವಯವ ಪದ್ಧತಿಯಲ್ಲಿ ವಿವಿಧ ತರಕಾರಿಗಳನ್ನು ಬೆಳೆಯುವ ವಿಧಾನ ಹಾಗೂ ಆರೋಗ್ಯಕರ ಆಹಾರ ಪದ್ಧತಿಯ ಮಹತ್ವವನ್ನು ಗ್ರಾಮಸ್ಥರಿಗೆ ತಿಳಿಸಿಕೊಡಲಾಯಿತು.
ವಿದ್ಯಾರ್ಥಿಗಳ ಸಕ್ರಿಯ ಪಾಲ್ಗೊಳ್ಳುವಿಕೆ: RHWEP ವಿದ್ಯಾರ್ಥಿಗಳಾದ ಚೇತನ್ ಆನ್ವೇರಿ, ಈಶ್ವರ್ ಅಗಸರ, ಮಹೇಶ್ ಕೊಣ್ಣೂರ, ಮಾಳಪ್ಪ ಜಿ., ಪದ್ಮನಾಭ ಜೋಶಿ, ಶಿವಕುಮಾರ್ ಬನ್ನಿಗೋಳಮಠ, ಶ್ರೇಯಸ್ ಬಿ. ಆರ್. ಮತ್ತು ಎಸ್. ಎಂ. ವಿಶ್ವನಾಥ್ ಅವರು ಗ್ರಾಮಸ್ಥರೊಂದಿಗೆ ಬೆರೆತು ಪ್ರಾಯೋಗಿಕ ಜ್ಞಾನವನ್ನು ಹಂಚಿಕೊಂಡರು.
“ಮಾಹಿತಿಯಿಂದ ಬೆಳವಣಿಗೆ – ಕೃಷಿಯಿಂದ ಸಮೃದ್ಧಿ” ಎಂಬ ಆಶಯದೊಂದಿಗೆ ಮೂಡಿಬಂದ ಈ ಕಾರ್ಯಕ್ರಮವು ರೈತರು ಮತ್ತು ಯುವ ವಿದ್ಯಾರ್ಥಿಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಮೈಲಿಗಾಲಾಗಿದೆ.




