ವಿಶೇಷ ವರದಿ:
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಗ್ರಾಮೀಣ ಭಾಗದ ಜನರಿಗೆ ಸುಲಭ, ಸುರಕ್ಷಿತ ಸಾರಿಗೆ ತಲುಪಿಸಬೇಕಾದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಕೆಲ ಸಿಬ್ಬಂದಿಗಳ ಬೇಜವಾಬ್ದಾರಿತನದಿಂದಾಗಿ ಸಾರ್ವಜನಿಕರು ಪ್ರತಿನಿತ್ಯ ಹೈರಾಣಾಗುತ್ತಿದ್ದಾರೆ. ಹಿರಿಯೂರು-ಧರ್ಮಪುರ ಮಾರ್ಗದಲ್ಲಿ ಸಂಚರಿಸುವ ಕೆಎಸ್ಆರ್ಟಿಸಿ ಬಸ್ ಚಾಲಕ ಮನ್ಸೂರ್ ಎಂಬುವವರ ಉದ್ಧಟತನ ಹಾಗೂ ಮೇಲಾಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಈಗ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಯಾಣಿಕರು ಕೈ ಸನ್ನೆ ಮಾಡಿದರೂ ನಿಲ್ಲಿಸದ ಬಸ್: ಚಂದ್ರವಳ್ಳಿ 'ರಿಯಾಲಿಟಿ ಚೆಕ್'ನಲ್ಲಿ ಬಯಲು!
ಗ್ರಾಮಸ್ಥರು ಸಾರಿಗೆ ಸಂಸ್ಥೆಗೆ ಸಾಲು ಸಾಲು ಮನವಿಗಳನ್ನು ನೀಡಿ, ಕಾಡಿ-ಬೇಡಿ ಪಡೆದುಕೊಂಡ ಬಸ್ ಸೇವೆಯನ್ನು ಸಮರ್ಪಕವಾಗಿ ನಡೆಸಲು ಚಾಲಕ ಮನ್ಸೂರ್ ನಿರಾಕರಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿದ್ದವು. ಈ ದೂರುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ‘ಚಂದ್ರವಳ್ಳಿ’ ಪತ್ರಿಕೆಯ ವರದಿಗಾರರು ಕಳೆದ ಶನಿವಾರ ಬೆಳಿಗ್ಗೆ 9.20ಕ್ಕೆ ಹಿರಿಯೂರು ಟಿ.ಬಿ. ವೃತ್ತದಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬಸ್ ಹತ್ತಿ 'ರಿಯಾಲಿಟಿ ಚೆಕ್' ನಡೆಸಿದರು.
ಟಿ.ಬಿ ವೃತ್ತದಿಂದ ಧರ್ಮಪುರ ಕಡೆಗೆ ಚಲಿಸುವ ಮಾರ್ಗದಲ್ಲಿನ ಆರಂಭಿಕ ನಿಲುಗಡೆಯಾದ ಬಬ್ಬೂರು ಗ್ರಾಮದಲ್ಲಿ ಐದಾರು ಜನ ಮಹಿಳಾ ಪ್ರಯಾಣಿಕರು ಬಸ್ಸಿಗಾಗಿ ಕಾಯುತ್ತಿದ್ದರು. ಬಸ್ ಹತ್ತಿರ ಬಂದಾಗ ಮಹಿಳೆಯರು ನಿಲ್ಲಿಸುವಂತೆ ಕೈ ಸನ್ನೆ ಮಾಡಿದರೂ, ಚಾಲಕ ಮನ್ಸೂರ್ ಬಸ್ ನಿಲ್ಲಿಸದೆ ಉದ್ಧಟತನದಿಂದ ಮುನ್ನಡೆಸಿದರು. ಇದನ್ನು ಸ್ಥಳದಲ್ಲೇ ಪ್ರಶ್ನಿಸಿದ ‘ಚಂದ್ರವಳ್ಳಿ’ ವರದಿಗಾರರೊಂದಿಗೆ ಉದ್ಧಟತನದ ಮಾತುಗಳನ್ನಾಡಿದ ಚಾಲಕ, "ಸಿಕ್ಕ ಸಿಕ್ಕ ಕಡೆ ನಿಲ್ಲಿಸಲು ಸಾಧ್ಯವಿಲ್ಲ, ನೀವು ಡಿಸಿ (ವಿಭಾಗೀಯ ನಿಯಂತ್ರಣಾಧಿಕಾರಿ) ಅಲ್ಲ; ಯಾರಿಗೆ ಬೇಕಾದರೂ ದೂರು ನೀಡಿ" ಎಂದು ಏರು ಧ್ವನಿಯಲ್ಲಿ ಗೇಲಿ ಮಾಡಿದ್ದಾನೆ.
ಖಾಸಗಿ ಬಸ್ಗಳಿಗೆ ಅನುಕೂಲ ಮಾಡುವ ಷಡ್ಯಂತ್ರ?:
ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರು, ಮಕ್ಕಳು ಹಾಗೂ ವಯೋವೃದ್ಧರನ್ನು ಬಸ್ಗೆ ಹತ್ತಿಸಿಕೊಳ್ಳದೆ ರಸ್ತೆಯಲ್ಲೇ ಬಿಟ್ಟು ಹೋಗುತ್ತಿರುವುದರ ಹಿಂದೆ ದೊಡ್ಡ ಷಡ್ಯಂತ್ರವೇ ಅಡಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. KSRTC ಬಸ್ ನಿಲ್ಲಿಸದೆ ಹೋದಾಗ ಅನಿವಾರ್ಯವಾಗಿ ಪ್ರಯಾಣಿಕರು ಖಾಸಗಿ ಬಸ್ಗಳನ್ನು ಆಶ್ರಯಿಸಬೇಕಾಗುತ್ತದೆ. ಹೀಗೆ ಖಾಸಗಿ ಬಸ್ಗಳಿಗೆ ಅಕ್ರಮವಾಗಿ ಲಾಭ ಮಾಡಿಕೊಡುವ ಉದ್ದೇಶದಿಂದಲೇ ಚಾಲಕ ಈ ರೀತಿ ವರ್ತಿಸುತ್ತಿದ್ದಾನೆಯೇ? ಎಂಬ ಅನುಮಾನ ಉಂಟಾಗಿದೆ. "ಈ ಮಾರ್ಗದಲ್ಲಿ ಪ್ರಯಾಣಿಕರಿಲ್ಲ, ಆರ್ಥಿಕ ನಷ್ಟವಾಗುತ್ತಿದೆ" ಎಂಬ ಸುಳ್ಳು ನೆಪ ಒಡ್ಡಿ ಮುಂದಿನ ದಿನಗಳಲ್ಲಿ ಈ ಗ್ರಾಮೀಣ ಬಸ್ ಸೇವೆಯನ್ನೇ ಬಂದ್ ಮಾಡಿಸುವ ದುರುದ್ದೇಶ ಇದರ ಹಿಂದಿದೆಯೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ದೂರಿಗೂ ಕ್ಯಾರೇ ಎನ್ನದ ಮೇಲಾಧಿಕಾರಿಗಳು: ಸಾರಿಗೆ ಇಲಾಖೆಯ ನಿರ್ಲಕ್ಷ್ಯ ಘಟನೆಯ ಕುರಿತು ಬಸ್ನಲ್ಲಿದ್ದ ವರದಿಗಾರರು ಹಿರಿಯೂರು ಬಸ್ ನಿಲ್ದಾಣದ ನಿರ್ವಾಹಕಿ ನೇತ್ರಮ್ಮ ಅವರಿಗೆ ಮೊಬೈಲ್ ಪೋನ್ ಮೂಲಕ ದೂರು ಹೇಳಿದಾಗ, "ಅವರು(ಚಾಲಕರು) ಎಷ್ಟು ಹೇಳಿದರೂ ಹೀಗೆಯೇ ಮಾಡುತ್ತಿದ್ದಾರೆ, ನೀವೇ ಡಿಪೋ ವ್ಯವಸ್ಥಾಪಕರಿಗೆ ದೂರು ಹೇಳಿ" ಎಂದು ಮೊಬೈಲ್ ಸಂಖ್ಯೆ ನೀಡಿ ಜಾರಿಕೊಂಡರು. ಬಳಿಕ ಡಿಪೋ ವ್ಯವಸ್ಥಾಪಕಿ (DM) ಅರುಣಾ ಕುಮಾರಿ ಅವರಿಗೆ ಎರಡು ಬಾರಿ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ. ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಬೇಕಾದ ಅಧಿಕಾರಿಗಳ ಈ ಉಡಾಫೆ ಧೋರಣೆ ಸಂಸ್ಥೆಯ ಆಡಳಿತ ಕುಸಿತಕ್ಕೆ ಸಾಕ್ಷಿಯಾಗಿದೆ.

ಹೆದರಿಕೆ ಇಲ್ಲದ ಸಿಬ್ಬಂದಿ – ಕಠಿಣ ಕ್ರಮ ಜರುಗಿಸಲಿ!:
ಗ್ರಾಮೀಣ ಪ್ರಯಾಣಿಕರನ್ನು ರಸ್ತೆಯಲ್ಲಿ ಬಿಟ್ಟು, ಸಾರಿಗೆ ಸಂಸ್ಥೆಗೆ ಆರ್ಥಿಕ ನಷ್ಟ ಉಂಟುಮಾಡುತ್ತಿರುವ ಹಾಗೂ ಪ್ರಯಾಣಿಕರೊಂದಿಗೆ ದುರ್ವರ್ತನೆ ತೋರಿದ ಚಾಲಕ ಮನ್ಸೂರ್ ವಿರುದ್ಧ ತಕ್ಷಣವೇ ಶಿಸ್ತು ಕ್ರಮ ಕೈಗೊಳ್ಳಬೇಕು. ಚಾಲಕ ಮನ್ಸೂರ್ ವಿರುದ್ಧ ತಕ್ಷಣ ಅಮಾನತು ಮಾಡುವ ಕಾರ್ಯ ಮಾಡಬೇಕಿದೆ.
ಮೇಲಾಧಿಕಾರಿಗಳ ಹೊಣೆಗಾರಿಕೆ: ಸಾರ್ವಜನಿಕರ ದೂರುಗಳನ್ನು ಆಲಿಸಿಕೊಳ್ಳದೆ, ನಿರ್ಲಕ್ಷ್ಯ ವಹಿಸಿರುವ ಹಿರಿಯೂರು ಡಿಪೋ ವ್ಯವಸ್ಥಾಪಕರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆಯೂ ತನಿಖೆಯಾಗಬೇಕು. ಚಾಲಕರನ್ನು ನಿಯಂತ್ರಿಸಬೇಕಾದ ಡಿಪೋ ವ್ಯವಸ್ಥಾಕರು ಸಾರ್ವಜನಿಕರ ದೂರಗಳನ್ನ ಆಲಿಸಿ ಕ್ರಮ ಕೈಗೊಳ್ಳದಿರುವುದು ಅನುಮಾನಗಳಿಗೆ ಎಡಿ ಮಾಡಿಕೊಡುತ್ತಿದೆ.
ಸಮಯ ವ್ಯರ್ಥಕ್ಕೆ ಪರಿಹಾರ: ಸಕಾಲಕ್ಕೆ ಬಸ್ ಸಿಗದೆ ಸಾರ್ವಜನಿಕರ ಸಮಯ ವ್ಯರ್ಥವಾಗುತ್ತಿರುವುದಕ್ಕೆ ಸಾರಿಗೆ ಸಂಸ್ಥೆ ತಕ್ಷಣವೇ ಸೂಕ್ತ ಸಮಜಾಯಿಷಿ ನೀಡಬೇಕು ಮತ್ತು ಗ್ರಾಮೀಣ ಮಾರ್ಗದಲ್ಲಿ ಬಸ್ ನಿಲುಗಡೆ ಕಡ್ಡಾಯಗೊಳಿಸಬೇಕು.
ಜನಪ್ರತಿನಿಧಿಗಳು ಹಾಗೂ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು (DC) ತಕ್ಷಣವೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು. ತಪ್ಪಿತಸ್ಥ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ನಿಯಮಿತ ಬಸ್ ಸೇವೆ ಖಾತ್ರಿಪಡಿಸದಿದ್ದರೆ ಗ್ರಾಮೀಣ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳೊಂದಿಗೆ ಸೇರಿ ಬಸ್ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ತೀವ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಗ್ರಾಮೀಣ ಭಾಗದ ಪ್ರಯಾಣಿಕರು ಎಚ್ಚರಿಸಿದ್ದಾರೆ.




