ಚಂದ್ರವಳ್ಳಿ ನ್ಯೂಸ್, ನವದೆಹಲಿ:
ರಸ್ತೆಯಲ್ಲಿ ಪ್ರತಿಭಟನೆ ನಡೆಸುವ ಬದಲು ನೇರವಾಗಿ ದೆಹಲಿಗೆ ಆಗಮಿಸಿ, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕಬ್ಬು ಬೆಳೆಗಾರರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಕರ್ನಾಟಕದ ಕಬ್ಬು ಬೆಳೆಗಾರರಿಗೆ ಮುಕ್ತ ಆಹ್ವಾನ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಕಬ್ಬು ಬೆಳೆಗಾರರು ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ ತಮ್ಮ 'X' ಖಾತೆಯಲ್ಲಿ ವೀಡಿಯೊ ಸಂದೇಶ ಹಂಚಿಕೊಂಡಿರುವ ಸಚಿವರು, ರೈತರ ಸಮಸ್ಯೆಗಳನ್ನು ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾವಾಗಲೂ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಾತುಕತೆಗೆ ಮುಕ್ತ ಆಹ್ವಾನ: ರೈತರು ಬೀದಿಗಿಳಿದು ಪ್ರತಿಭಟನೆ ನಡೆಸುವ ಔಚಿತ್ಯವಿಲ್ಲ. ರೈತ ಮುಖಂಡರು ದೆಹಲಿಗೆ ಬಂದರೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಕೂರಿಸಿ, ಮುಕ್ತ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು.
ಕಳೆದ ಬಾರಿಯ ಎಫ್ಆರ್ಪಿ ಹೆಚ್ಚಳ ನೆನಪು: 2026ರ ಫೆಬ್ರವರಿಯಲ್ಲಿ ರೈತ ಮುಖಂಡರು ಭೇಟಿಯಾಗಿ ಮನವಿ ಮಾಡಿದ್ದರ ಮೇರೆಗೆ, ಕೇಂದ್ರ ಸರ್ಕಾರವು ಮೇ ತಿಂಗಳಲ್ಲೇ ಎಫ್ಆರ್ಪಿ ಮೊತ್ತವನ್ನು ಪ್ರತಿ ಕ್ವಿಂಟಾಲ್ಗೆ ₹365ಕ್ಕೆ ಹೆಚ್ಚಿಸಿ ರೈತರಿಗೆ ನೆರವಾಗಿದೆ.
ವೈಜ್ಞಾನಿಕ ತೀರ್ಮಾನ: ಕಬ್ಬಿನ ಎಫ್ಆರ್ಪಿ ದರ ಹೆಚ್ಚಳದ ನಿರ್ಧಾರವನ್ನು ಬೆಲೆ ನಿಗದಿ ಸಮಿತಿ ಹಾಗೂ ರಾಜ್ಯ ಸರ್ಕಾರದ ಕಬ್ಬು ಆಯುಕ್ತರ ವರದಿ ಮತ್ತು ಶಿಫಾರಸುಗಳನ್ನು ಆಧರಿಸಿ ತೆಗೆದುಕೊಳ್ಳಲಾಗುತ್ತದೆ.
ರೈತರ ಪರ ಸರ್ಕಾರ: ರೈತರ ಹಿತಾಸಕ್ತಿ ಕಾಪಾಡುವುದೇ ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ಯಾವುದೇ ಗೊಂದಲಗಳಿದ್ದರೂ ಸುದೀರ್ಘವಾಗಿ ಚರ್ಚಿಸಿ ಸೂಕ್ತ ಪರಿಹಾರ ಒದಗಿಸಲು ಸಿದ್ಧವಿರುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ರೈತರ ಅಹವಾಲುಗಳನ್ನು ಅತ್ಯಂತ ವಿನಮ್ರವಾಗಿ ಆಲಿಸಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಆದ್ದರಿಂದ ರೈತರು ಯಾವುದೇ ಆತಂಕಕ್ಕೊಳಗಾಗದೆ ಸರ್ಕಾರದೊಂದಿಗೆ ಚರ್ಚೆಗೆ ಬರಬೇಕು ಎಂದು ಪ್ರಲ್ಹಾದ್ ಜೋಶಿ ಮತ್ತೊಮ್ಮೆ ಮನವಿ ಮಾಡಿದ್ದಾರೆ.




