ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರ ಭಾರಿ ಕೈಗಾರಿಕೆ ಹಾಗೂ ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ‘ಮೇಕ್ ಇನ್ ಇಂಡಿಯಾ’ ಅಭಿಯಾನವು 12 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಹಿನ್ನೆಲೆಯಲ್ಲಿ ಅಭಿಯಾನದ ಜಾಗತಿಕ ಸಾಧನೆಗಳನ್ನು ಶ್ಲಾಘಿಸಿದ್ದಾರೆ.
"ಮೇಕ್ ಇನ್ ಇಂಡಿಯಾ ಎಂದರೆ ಕೇವಲ ಭಾರತದಲ್ಲಿ ತಯಾರಿಸುವುದು ಮಾತ್ರವಲ್ಲ; ಭಾರತೀಯ ಉತ್ಪನ್ನಗಳು ಮತ್ತು ಸಾಮರ್ಥ್ಯಗಳು ಜಾಗತಿಕ ಮಟ್ಟವನ್ನು ಹೇಗೆ ತಲುಪುತ್ತಿವೆ ಎಂಬುದಕ್ಕೆ ಸಾಕ್ಷಿ" ಎಂದು ಅವರು ಹೆಮ್ಮೆಯಿಂದ ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಈ ಅಭಿಯಾನವು 'ಆತ್ಮನಿರ್ಭರ ಭಾರತ'ವನ್ನು ಬಲಪಡಿಸುತ್ತಿದ್ದು, 'ವಿಕಸಿತ ಭಾರತ 2047'ರತ್ತ ದೇಶವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ಸಚಿವರು ಹಂಚಿಕೊಂಡ ವಿವಿಧ ವಲಯಗಳ ಪ್ರಮುಖ ಸಾಧನೆಗಳು ಹೀಗಿವೆ:
೧. ಹಡಗು ನಿರ್ಮಾಣ ಮತ್ತು ಮರುಬಳಕೆ
2025ರಲ್ಲಿ ಭಾರತವು ವಿಶ್ವದಲ್ಲೇ ಅತಿ ದೊಡ್ಡ ಹಡಗು ಮರುಬಳಕೆ ರಾಷ್ಟ್ರವಾಗಿ ಹೊರಹೊಮ್ಮಿದೆ. ಇದರ ಜೊತೆಗೆ, ದೇಶೀಯ ಉತ್ಪಾದನಾ ಕ್ಷೇತ್ರವು ಜಾಗತಿಕ ಹಡಗು ಪೂರೈಕೆ ಸರಪಳಿಯಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಳ್ಳುತ್ತಿದೆ.
೨. ಆಟಿಕೆ ಉದ್ಯಮ
ಭಾರತೀಯ ಆಟಿಕೆ ಉದ್ಯಮವು ಅಭೂತಪೂರ್ವ ಬೆಳವಣಿಗೆ ಕಂಡಿದ್ದು, ಪ್ರಸ್ತುತ ಜಾಗತಿಕವಾಗಿ 150ಕ್ಕೂ ಹೆಚ್ಚು ದೇಶಗಳಿಗೆ ಭಾರತದ ಆಟಿಕೆಗಳು ರಫ್ತಾಗುತ್ತಿವೆ. ದೇಶದಲ್ಲಿ ವಾರ್ಷಿಕವಾಗಿ 40 ಕೋಟಿಗೂ ಹೆಚ್ಚು ಆಟಿಕೆಗಳು ಉತ್ಪಾದನೆಯಾಗುತ್ತಿವೆ.
೩. ಜವಳಿ ಕ್ಷೇತ್ರ
ಭಾರತವು ಜಾಗತಿಕವಾಗಿ ಅಗ್ರ 6 ಜವಳಿ ಮತ್ತು ಸಿದ್ಧ ಉಡುಪು ರಫ್ತುದಾರ ರಾಷ್ಟ್ರಗಳಲ್ಲಿ ಒಂದಾಗಿ ತನ್ನ ಸ್ಥಾನವನ್ನು ಕಾಯ್ದುಕೊಂಡಿದೆ. 2024-25ರ ಆರ್ಥಿಕ ವರ್ಷದಲ್ಲಿ ಜವಳಿ ಕ್ಷೇತ್ರದಿಂದ ಸುಮಾರು 38 ಬಿಲಿಯನ್ ಡಾಲರ್ ಮೌಲ್ಯದ ಉತ್ಪನ್ನಗಳು ರಫ್ತಾಗಿವೆ.
೪. ಮೆಡ್‌ಟೆಕ್ ಮತ್ತು ಫಾರ್ಮಾ
ಔಷಧ ಉತ್ಪಾದನೆಯ ಪ್ರಮಾಣದಲ್ಲಿ ಭಾರತವು ಜಾಗತಿಕವಾಗಿ 3ನೇ ಸ್ಥಾನದಲ್ಲಿದೆ. ಜೊತೆಗೆ, 2024-25ರಲ್ಲಿ ಭಾರತದ ವೈದ್ಯಕೀಯ ಉಪಕರಣಗಳ ರಫ್ತು ₹42,350 ಕೋಟಿಗೂ ಅಧಿಕ ಮೌಲ್ಯವನ್ನು ತಲುಪಿದೆ.
ಸಾಂಪ್ರದಾಯಿಕ ಶಕ್ತಿಯಿಂದ ಹಿಡಿದು ಆಧುನಿಕ ಉದಯೋನ್ಮುಖ ಉತ್ಪಾದನಾ ರಂಗದವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮವು ಭಾರತೀಯ ಉದ್ಯಮಶೀಲತೆಯನ್ನು ಜಾಗತಿಕ ಸಾಮರ್ಥ್ಯವನ್ನಾಗಿ ಪರಿವರ್ತಿಸುತ್ತಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.




