ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಯುವ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಕನಸಿಗೆ ದೊಡ್ಡ ಶಕ್ತಿ ತುಂಬಿದೆ ಎಂದು ಬಿಜೆಪಿ ಹಿರಿಯ ನಾಯಕ ಸಿ.ಟಿ. ರವಿ ಹರ್ಷ ವ್ಯಕ್ತಪಡಿಸಿದ್ದಾರೆ.
ದೇಶಾದ್ಯಂತ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಾಗಿದ್ದು, 13,186 ನೂತನ ಎಂಬಿಬಿಎಸ್ ಸೀಟುಗಳನ್ನು ಸೇರ್ಪಡೆ ಮಾಡಲಾಗಿದೆ. ಈ ಪೈಕಿ ಕರ್ನಾಟಕ ರಾಜ್ಯಕ್ಕೆ ಗರಿಷ್ಠ ಸಂಖ್ಯೆಯ ಸೀಟುಗಳು ಲಭಿಸಿರುವುದು ಹೆಮ್ಮೆಯ ವಿಚಾರ ಎಂದು ಅವರು ಹೇಳಿದ್ದಾರೆ.
ಕರ್ನಾಟಕ ದೇಶದಲ್ಲೇ ಪ್ರಥಮ:
ಹೊಸ ಸೀಟುಗಳ ಸೇರ್ಪಡೆಯೊಂದಿಗೆ ದೇಶಾದ್ಯಂತ ಒಟ್ಟು 836 ವೈದ್ಯಕೀಯ ಕಾಲೇಜುಗಳಲ್ಲಿ ಲಭ್ಯವಿರುವ ಎಂಬಿಬಿಎಸ್ ಸೀಟುಗಳ ಸಂಖ್ಯೆ 1,40,214ಕ್ಕೆ ಏರಿಕೆಯಾಗಿದೆ. ಇದರಲ್ಲಿ ಕರ್ನಾಟಕ ರಾಜ್ಯವು 1,650 ಹೊಸ ಸೀಟುಗಳನ್ನು ಪಡೆಯುವ ಮೂಲಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಇದರ ಪರಿಣಾಮವಾಗಿ ರಾಜ್ಯದಲ್ಲಿ ಒಟ್ಟು ವೈದ್ಯಕೀಯ ಸೀಟುಗಳ ಸಂಖ್ಯೆ 15,745ಕ್ಕೆ ತಲುಪಿದೆ.
ದೂರದೃಷ್ಟಿಯ ನಿರ್ಧಾರ:
ಕೇಂದ್ರ ಸರ್ಕಾರದ ಈ ದೂರದೃಷ್ಟಿಯ ನಿರ್ಧಾರವು ಭವಿಷ್ಯದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಬಯಸುವ ಲಕ್ಷಾಂತರ ಯುವ ಆಕಾಂಕ್ಷಿಗಳಿಗೆ ಹೊಸ ಭರವಸೆ ಮತ್ತು ಹೆಚ್ಚಿನ ಅವಕಾಶಗಳನ್ನು ಒದಗಿಸಲಿದೆ. ದೇಶದ ಆರೋಗ್ಯ ಕ್ಷೇತ್ರವನ್ನು ಮತ್ತು ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೈಗೊಂಡ ಈ ಮಹತ್ವದ ಕ್ರಮಕ್ಕಾಗಿ ಸಿ.ಟಿ. ರವಿ ಅವರು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.




