ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಚಿವ ಕೆ.ಎಂ. ಶಿವಲಿಂಗೇಗೌಡರ ಇತ್ತೀಚಿನ ವಿವಾದಿತ "ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡುವುದು ನಿಮ್ಮ ಧರ್ಮ" ಎಂಬ ಹೇಳಿಕೆ ಈಗ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವುದಲ್ಲದೆ, ಸಾರ್ವಜನಿಕರ ಆಕ್ರೋಶಕ್ಕೆ ವಿನೂತನ ಅಸ್ತ್ರವಾಗಿದೆ.
ಸರ್ಕಾರದ ಗಮನ ಸೆಳೆಯಲು ಮತ್ತು ಮೂಲಸೌಕರ್ಯಗಳ ವೈಫಲ್ಯವನ್ನು ಎತ್ತಿ ತೋರಿಸಲು ಸಚಿವರ ಅದೇ ಹೇಳಿಕೆಯನ್ನು ಬಳಸಿಕೊಂಡು ಬೆಂಗಳೂರಿನಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಲಾಗಿದೆ.
ಬೆಂಗಳೂರಿನ ಪೀಣ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಸ್ತೆಗಳು ಸಂಪೂರ್ಣವಾಗಿ ಹದೆಗೆಟ್ಟು, ಸಂಚಾರಕ್ಕೆ ಅಯೋಗ್ಯವಾಗಿವೆ. ಇದರಿಂದ ರೋಸಿಹೋದ ನೊಂದ ವಾಹನ ಚಾಲಕರು ಮತ್ತು ಸಾರ್ವಜನಿಕರು ರಸ್ತೆ ಬದಿಯಲ್ಲಿ ವಿಶಿಷ್ಟ ಫಲಕಗಳನ್ನು ಅಳವಡಿಸುವ ಮೂಲಕ ಸರ್ಕಾರದ ವಿರುದ್ಧ ವ್ಯಂಗ್ಯವಾಗಿ ಆಕ್ರೋಶ ಹೊರಹಾಕಿದ್ದಾರೆ.
ಫಲಕದ ಮೇಲಿದ್ದ ಕಟಕಟೆಯ ಬರಹವೇನು?
ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿರುವ ಈ ಬ್ಯಾನರ್ಗಳು ಹಾಗೂ ಫಲಕಗಳ ಮೇಲೆ, "ಗೌರವಯುತವಾಗಿ ನಮ್ಮ ಧರ್ಮ ಎಂದುಕೊಂಡು ಕೊಡುವುದನ್ನು ಕೊಡಲಾಗುವುದು, ದಯವಿಟ್ಟು ರಸ್ತೆಯನ್ನು ಡಾಂಬರೀಕರಣಗೊಳಿಸಿಕೊಡಿ - ಇಂತಿ ನೊಂದ ವಾಹನ ಚಾಲಕರು" ಎಂದು ಬರೆಯಲಾಗಿದೆ.
ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಲು ಸಚಿವರ ಲಂಚದ ಸಮರ್ಥನೆಯಂತಹ ಹೇಳಿಕೆಯನ್ನು ಉದಾಹರಣೆಯಾಗಿ ಬಳಸಿಕೊಳ್ಳುವ ಮೂಲಕ ಸಾರ್ವಜನಿಕರು ವಿಭಿನ್ನವಾಗಿ ಸರ್ಕಾರದ ಗಮನಸೆಳೆದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಹಾಗೂ ಆಕ್ರೋಶ:
ರಸ್ತೆ ಬದಿಯಲ್ಲಿ ಹಾಕಲಾಗಿರುವ ಈ ಫಲಕಗಳ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ. ಬೆಂಗಳೂರಿನ ನರಕ ಸದೃಶ್ಯ ರಸ್ತೆಗಳ ಪರಿಸ್ಥಿತಿ ಕಂಡು ಕನ್ನಡಿಗರು ಮತ್ತು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, "ಗೌರವಯುತವಾಗಿ... ಗೌರವದಿಂದ... ಗೌರವಕೋಸ್ಕರವಾದರೂ ದಯಮಾಡಿ ರಸ್ತೆ ರಿಪೇರಿ ಮಾಡಿ" ಎಂದು ಕಾಮೆಂಟ್ಗಳ ಸುರಿಮಳೆಗೈಯುತ್ತಿದ್ದಾರೆ.
ಏನಿದು ಸಚಿವ ಶಿವಲಿಂಗೇಗೌಡರ ವಿವಾದಿತ ಹೇಳಿಕೆ?:
ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಕಳೆದ ವಾರಾಂತ್ಯ ನಡೆದ ಪ್ರಜಾಸೇವೆ ಆಂದೋಲನ ಸಭೆಯಲ್ಲಿ, ಅಬಕಾರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡರು ವಿವಾದಿತ ಹೇಳಿಕೆ ನೀಡಿದ್ದರು. ಸಭೆಯಲ್ಲಿ ಸಾರ್ವಜನಿಕರು ಅಧಿಕಾರಿಗಳು ಕೆಲಸ ಮಾಡಿಕೊಡಲು ಲಂಚ ಕೇಳುತ್ತಿದ್ದಾರೆ ಎಂದು ಆರೋಪಿಸಿದಾಗ, ಸಚಿವರು ಪ್ರತಿಕ್ರಿಯಿಸಿ, ‘‘ಬಲವಂತದಿಂದ ಹಣ ಕಿತ್ತುಕೊಳ್ಳುವುದು ತಪ್ಪು. ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡುವುದು ನಿಮ್ಮ ಧರ್ಮ,’’ ಎಂದು ಹೇಳಿದ್ದರು.
ಸಚಿವರ ಈ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿ ವಿವಾದ ಸೃಷ್ಟಿಸಿತ್ತು. ಅಧಿಕಾರಿಗಳಿಗೆ ಲಂಚ ನೀಡಲು ಸಚಿವರೇ ಪರೋಕ್ಷವಾಗಿ ಪ್ರೋತ್ಸಾಹಿಸುತ್ತಿದ್ದಾರೆ ಎಂದು ವಿಪಕ್ಷ ಬಿಜೆಪಿ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿತ್ತು. ಅಲ್ಲದೆ, ಈ ವಿಚಾರವು ವಿಧಾನಸಭಾ ಅಧಿವೇಶನದಲ್ಲೂ ದೊಡ್ಡ ಕೋಲಾಹಲಕ್ಕೆ ಕಾರಣವಾಗಿತ್ತು. ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದು ಪ್ರತಿಭಟನೆ ನಡೆಸಿದ್ದವು.
ವಿವಾದ ಹೆಚ್ಚಾದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ್ದ ಸಚಿವ ಶಿವಲಿಂಗೇಗೌಡರು, ‘‘ನಾನು ಅಧಿಕಾರಿಗಳಿಗೆ ಲಂಚ ಕೊಡಿ ಎಂದು ಹೇಳಿಲ್ಲ. ಸಾರ್ವಜನಿಕರು ಕೊಡುವ ಗೌರವವನ್ನು ತಪ್ಪಾಗಿ ತಿರುಚಿ, ದುರುದ್ದೇಶದಿಂದ ಗೊಂದಲ ಸೃಷ್ಟಿಸಲಾಗುತ್ತಿದೆ’’ ಎಂದು ಸಮರ್ಥನೆ ನೀಡಿದ್ದರು.
ಸದ್ಯ ಸಚಿವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಮಾತ್ರವಲ್ಲದೆ, ಜನರ ದೈನಂದಿನ ಸಮಸ್ಯೆಗಳ ಮೇಲೂ ಪ್ರಭಾವ ಬೀರಿರುವುದು ವಿಶೇಷ. ರಸ್ತೆಗಳು ಸರಿ ಇಲ್ಲದ ಕಾರಣ ಬೇಸತ್ತಿರುವ ಜನಸಾಮಾನ್ಯರು, ಇದೀಗ ಇದೇ ಹೇಳಿಕೆಯನ್ನು ಅಸ್ತ್ರವನ್ನಾಗಿ ಬಳಸಿಕೊಂಡು ಸರ್ಕಾರದ ಕಣ್ಣು ತೆರೆಸುವ ಪ್ರಯತ್ನ ಮಾಡುತ್ತಿದ್ದಾರೆ.




