ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಸ್ವಾಭಿಮಾನದ ಗೌರವ ಸಂಸ್ಥೆಯನ್ನಾಗಿ ರೂಪಿಸಿ, ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜನಪದ ಇವುಗಳ ರಕ್ಷಣೆ, ಪ್ರಸಾರ ಮತ್ತು ಅಭಿವೃದ್ಧಿಗಾಗಿ ಶ್ರಮಿಸಿ, ಕನ್ನಡ, ಕನ್ನಡಿಗ, ಕರ್ನಾಟಕ, ಎಂಬ ಪರಿಕಲ್ಪನೆಯ ಕಾರ್ಯಕ್ರಮಗಳ ಯೋಜನೆಗಳನ್ನು ರೂಪಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತಿನ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ನನಗೆ ಒಂದು ಅವಕಾಶ ಕಲ್ಪಿಸಿ ಕೊಡಿ ಎಂದು ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿಯಾಗಿರುವ ಡಾ. ಸಿ. ಸೋಮಶೇಖರ್ ಮನವಿ ಮಾಡಿದರು.
ನಗರದ ಖಾಸಗಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕನ್ನಡ ಸಾಹಿತ್ಯ, ಸಂಸ್ಕೃತಿ, ಕಲೆಗಳ ಆರಾಧಕನಾಗಿರುವ ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಮುಂಬರುವ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ನನ್ನ ಆತ್ಮೀಯ ಕನ್ನಡ ಪರ ಚಿಂತಕರು ಮತ್ತು ಮಿತ್ರರ ಒತ್ತಾಸೆಯಿಂದ ಮುಂಬರುವ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ 'ರಾಜ್ಯಾಧ್ಯಕ್ಷ ಸ್ಥಾನ'ದ ಸೇವಾಕಾಂಕ್ಷಿಯಾಗಿ ಸ್ಪರ್ಧಿಸಿದ್ದೇನೆ.ಈಗಾಗಲೇ ನಾಡಿನಾದ್ಯಂತ ಪ್ರವಾಸ ಕೈಗೊಂಡು ಪರಿಷತ್ತಿನ ಆಜೀವ ಸದಸ್ಯರುಗಳನ್ನು, ಹಿರಿಯ ಸಾಹಿತಿಗಳನ್ನು ಹಾಗೂ ಕನ್ನಡ ಪರ ಹೋರಾಟಗಾರರನ್ನು ಸಂಪರ್ಕಿಸಿ ಅವರ ಸಹಕಾರ ಮತ್ತು ಮಾರ್ಗದರ್ಶನವನ್ನು ಕೋರಿದ್ದು ಈ ಮೂಲಕ ಕನ್ನಡ ಭಾಷೆ, ಸಾಹಿತ್ಯ ಕ್ಷೇತ್ರದಲ್ಲಿ ಮತ್ತಷ್ಟು ಉನ್ನತೀಕರಣ ಕಾರ್ಯಕ್ರಮಗಳನ್ನು ಕೈಗೊಳ್ಳಲು ಒಂದು ಅವಕಾಶ ಕಲ್ಪಿಸಿ ಕೊಡಬೇಕೆಂದು ಈ ಮೂಲಕ ಮನವಿ ಮಾಡುತ್ತೇನೆ ಎಂದರು.
ನನಗೆ ಕನ್ನಡ ಸಾಹಿತ್ಯ, ಸಂಸ್ಕೃತಿ, ಕಲೆಗಳ ಬಗ್ಗೆ ಅಪಾರವಾದ ಪ್ರೀತಿ ಮತ್ತು ಆಸಕ್ತಿ ಸಹಜವಾಗಿ ಮೂಡಿ ಬಂದಿದೆ.ಅಖಿಲ ಭಾರತ ಲೋಕಸೇವಾ ಆಯೋಗದ ಪರೀಕ್ಷೆಯನ್ನು ಸಂಪೂರ್ಣವಾಗಿ ಕನ್ನಡ ಮಾಧ್ಯಮದಲ್ಲಿಯೇ ಉತ್ತರಿಸಿ ಕೇಂದ್ರ ಪ್ರಥಮ ದರ್ಜೆ ಸೇವೆಗೆ ಆಯ್ಕೆಯಾದ ನಾನು ಕನ್ನಡ ನಾಡು, ನುಡಿಯ ಮೇಲಿನ ಅಭಿಮಾನದಿಂದ ಕರ್ನಾಟಕದಲ್ಲಿಯೇ ಸೇವೆ ಸಲ್ಲಿಸಬೇಕೆಂಬ ಹಂಬಲದಿಂದ ಕರ್ನಾಟಕ ಆಡಳಿತ ಸೇವೆಯನ್ನೇ ಆಯ್ಕೆ ಮಾಡಿಕೊಂಡೆ. ಭಾರತ ಆಡಳಿತ ಸೇವೆಗೆ (ಐ.ಎ.ಎಸ್) ಪದೋನ್ನತಿ ಪಡೆದು ರಾಜ್ಯದ ಅನೇಕ ಇಲಾಖೆಗಳಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸಿದ ತೃಪ್ತಿ ನನ್ನದಾಗಿದೆ. ವಿಶೇಷವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾಗಿ ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕನಾಗಿ, ತುಮಕೂರು ಜಿಲ್ಲಾಧಿಕಾರಿಯಾಗಿ ಸರ್ಕಾರದ ಸಹಕಾರ ಇಲಾಖೆ ಕಾರ್ಯದರ್ಶಿಯಾಗಿ, ಸೇವೆ ಸಲ್ಲಿಸಿದ್ದು . ನಿವೃತ್ತಿಯ ನಂತರ ಅಂದಿನ ರಾಜ್ಯಪಾಲರಿಂದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಶಾಖೆಯ ಉಪಾಧ್ಯಕ್ಷನಾಗಿ ನೇಮಕಗೊಂಡು ನಾಡಿನಾದ್ಯಂತ ಪ್ರವಾಸಮಾಡಿ ಸೇವೆ ಸಲ್ಲಿಸಿದ್ದೇನೆ.
ನಂತರ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ ಕರ್ನಾಟಕದ ಗಡಿಭಾಗದಲ್ಲಿ ಕನ್ನಡ ಸಾಹಿತ್ಯ, ಸಂಸ್ಕೃತಿ, ಶಿಕ್ಷಣ ಮತ್ತು ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ . ನನ್ನ ಆಡಳಿತ ಅವಧಿಯಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ನೀಡಿ ಕನ್ನಡ ಭಾಷೆಯೇ ಸಾರ್ವಭೌಮ ಭಾಷೆಯಾಗಿ ಇರುವಂತೆ ಅಭಿಮಾನ ಪೂರಕವಾಗಿ ಪ್ರಯತ್ನಿಸಿದ್ದೇನೆ. ಸಂಸ್ಕೃತಿ ಮತ್ತು ಪ್ರಗತಿ ಆಡಳಿತ ನಾಣ್ಯದ ಎರಡು ಮುಖಗಳೆಂದೇ ಭಾವಿಸಿರುವ ನಾನು ಆಡಳಿತಕ್ಕೆ ಮಾನವೀಯ ಸ್ಪರ್ಶವನ್ನು ನೀಡಲು ಶ್ರಮಿಸಿದ್ದು ಇಂದು ತಮ್ಮ ಮುಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಸೇವೆ ಸಲ್ಲಿಸಲು ಅವಕಾಶ ಕೋರುತ್ತಿದ್ದೇನೆ.
ನಾಡಿನ, ಹೊರನಾಡಿನ ಎಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರುಗಳು ತಮ್ಮ ಆಶೀರ್ವಾದ ಮತ್ತು ಸಹಕಾರದ ಮೂಲಕ ಕನ್ನಡಿಗರ ಸ್ವಾಭಿಮಾನದ ಅಸ್ಮಿತೆಯ ಪ್ರತಿಷ್ಠಿತ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ 'ರಾಜ್ಯಾಧ್ಯಕ್ಷ ನೆಲೆ'ಯಲ್ಲಿ ಕನ್ನಡ ನಾಡು ನುಡಿ ಸಂಸ್ಕೃತಿಯ ಸೇವೆಯನ್ನು ಸಲ್ಲಿಸಲು ಪರಿಷತ್ತಿನ 'ರಾಜ್ಯಾಧ್ಯಕ್ಷನನ್ನಾಗಿ' ನನ್ನನ್ನು ಆಯ್ಕೆ ಮಾಡಿ ಕನ್ನಡ ನಾಡು, ನುಡಿಯ ಸೇವೆಯನ್ನು ಮಾಡಲು ನನಗೆ ಒಂದು ಅವಕಾಶವನ್ನು ನೀಡಬೇಕೆಂದು ವಿನಮ್ರವಾಗಿ ಪ್ರಾರ್ಥಿಸುತ್ತೇನೆ ಎಂದರು.
ಕೆ. ಎಂ.ಹನುಮಂತರಾಯಪ್ಪ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಶಿವರಾಮೇಗೌಡ, ಹುಲಿಕಲ್ ನಟರಾಜು, ಕಂಟನಕುಂಟೆ ಕೃಷ್ಣಮೂರ್ತಿ, ನಗರಸಭಾ ಅಧ್ಯಕರಾದ ಪ್ರಭ ನಾಗರಾಜ್, ಪ್ರಮೀಳಾ ಮಹದೇವ್,ಸುಧಾ, ವಸುಂದರ, ವತ್ಸಲಾ, ಕೆ. ಮಹಾಲಿಂಗಯ್ಯ, ತೂಬಗೆರೆ ಷರೀಫ್ ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯದ ಹಲವು ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳು, ಸದಸ್ಯರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.




