ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಒಂದು ವಿಶ್ವವಿದ್ಯಾಲಯದಿಂದ ಮತ್ತೊಂದಕ್ಕೆ ಸೇರಲು ತಾಂತ್ರಿಕ ರಾಜೀನಾಮೆ ನೀಡಿದ್ದರೂ, ನೌಕರನ ಹಿಂದಿನ ಸೇವೆಯನ್ನು ಪರಿಗಣಿಸದೆ ಇರಲು ಸಾಧ್ಯವಿಲ್ಲ ಮತ್ತು ಪಿಂಚಣಿಯು ಸರ್ಕಾರದ ದಯೆಯಲ್ಲ, ಅದು ನಿವೃತ್ತ ನೌಕರನ ಹಕ್ಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ ಮತ್ತು ಕೋರ್ಟ್ ಆದೇಶ: ಸುದೀರ್ಘ ಸೇವೆ: ಪ್ರೊ. ಚಿದಾನಂದರೆಡ್ಡಿ ಎಸ್. ಪಾಟೀಲ್ ಅವರು 1996 ರಿಂದ 2013ರವರೆಗೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಹಾಗೂ ನಂತರ 'ತಾಂತ್ರಿಕ ರಾಜೀನಾಮೆ' ನೀಡಿ 2013ರಿಂದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿಯಲ್ಲಿ ಒಟ್ಟು 28 ವರ್ಷಗಳ ಕಾಲ ಸೇವೆ ಸಲ್ಲಿಸಿ 2024 ಡಿಸೆಂಬರ್‌ನಲ್ಲಿ ನಿವೃತ್ತರಾಗಿದ್ದರು.
ಸರ್ಕಾರದ ತಡೆ: KSLUಗೆ ಸೇರಿದ್ದನ್ನು 'ಹೊಸ ನೇಮಕಾತಿ' ಎಂದು ಪರಿಗಣಿಸಿ, ಅವರಿಗೆ ಹಳೆಯ ಪಿಂಚಣಿ ಯೋಜನೆಯನ್ನು ತಡೆಹಿಡಿದು ಹೊಸ ಪಿಂಚಣಿ ಯೋಜನೆ ಅನ್ವಯವಾಗುತ್ತದೆ ಎಂದು ಸರ್ಕಾರ ಹೇಳಿತ್ತು. ಇದರಿಂದಾಗಿ ಕಳೆದ 24 ತಿಂಗಳುಗಳಿಂದ ಅವರಿಗೆ ಯಾವುದೇ ಪಿಂಚಣಿ ಸೌಲಭ್ಯ ದೊರೆತಿರಲಿಲ್ಲ.
ಹೈಕೋರ್ಟ್ ಸ್ಪಷ್ಟನೆ: ಸರ್ಕಾರದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಹಾಗೂ ನ್ಯಾಯಮೂರ್ತಿ ಹೇಮಾ ಕುಲಕರ್ಣಿ ಅವರಿದ್ದ ದ್ವಿಸದಸ್ಯ ಪೀಠವು, "ಆಡಳಿತಾತ್ಮಕ ಷರತ್ತುಗಳ ಮೂಲಕ ಶಾಸನಬದ್ಧ ಹಕ್ಕನ್ನು ಕಸಿದುಕೊಳ್ಳಲಾಗದು, ತಾಂತ್ರಿಕ ರಾಜೀನಾಮೆಯ ಸಂದರ್ಭದಲ್ಲಿ ಸೇವಾ ನಿರಂತರತೆ ಕಾಯ್ದುಕೊಳ್ಳುತ್ತದೆ" ಎಂದು ಸ್ಪಷ್ಟಪಡಿಸಿದೆ.
ಹೈಕೋರ್ಟ್ ನೀಡಿದ ಪ್ರಮುಖ ನಿರ್ದೇಶನಗಳು: 8 ವಾರಗಳಲ್ಲಿ ಬಿಡುಗಡೆ: ಅರ್ಜಿದಾರರ 1996 ರಿಂದ ನಿವೃತ್ತಿಯವರೆಗಿನ ಸೇವೆಯನ್ನು ಪರಿಗಣಿಸಿ ಹಳೆಯ ಪಿಂಚಣಿ ಯೋಜನೆ ಅಡಿಯಲ್ಲೇ 8 ವಾರಗಳಲ್ಲಿ ಪಿಂಚಣಿ ಹಾಗೂ ನಿವೃತ್ತಿ ಸೌಲಭ್ಯಗಳನ್ನು ನೀಡಬೇಕು.
ಶೇ. 6ರಷ್ಟು ಬಡ್ಡಿ ಪಾವತಿ: ಬಾಕಿ ಇರುವ ಪಿಂಚಣಿ ಮೊತ್ತಕ್ಕೆ ನಿವೃತ್ತಿಯ ದಿನಾಂಕದಿಂದ ಪಾವತಿಯಾಗುವವರೆಗೂ ಶೇ. 6 ರಷ್ಟು ಬಡ್ಡಿ ಸೇರಿಸಿ ಪಾವತಿಸಬೇಕು.
ವಿಳಂಬಕ್ಕೆ ದಂಡ: ಸರ್ಕಾರವು ನಿಗದಿತ ಅವಧಿಯಲ್ಲಿ ಹಣ ಬಿಡುಗಡೆ ಮಾಡದಿದ್ದಲ್ಲಿ ಬಡ್ಡಿದರವನ್ನು ಶೇ. 12ಕ್ಕೆ ಏರಿಸಲಾಗುವುದು ಹಾಗೂ ಅರ್ಜಿದಾರರಿಗೆ 1 ಲಕ್ಷ ವ್ಯಾಜ್ಯ ವೆಚ್ಚವನ್ನು ಪಾವತಿಸಬೇಕಾಗುತ್ತದೆ.




