ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
'ಬ್ರ್ಯಾಂಡ್ ಬೆಂಗಳೂರು' ಎಂದು ಭರ್ಜರಿ ಪ್ರಚಾರ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ನಗರದ ನೈಜ ವಾಸ್ತವತೆ ಕಾಣಿಸುತ್ತಿಲ್ಲವೇ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರವಾಗಿ ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ಕಿಡಿಕಾರಿರುವ ಅವರು, ನಗರದಲ್ಲಿ ಒಂದು ಮಳೆ ಬಂದರೆ ಸಾಕು — ಅಂಡರ್ಪಾಸ್ಗಳು ಜಲಾವೃತಗೊಂಡು, ರಸ್ತೆಗಳು ಕೆರೆಗಳಾಗಿ ಪರಿವರ್ತನೆಯಾಗುತ್ತಿವೆ. ಮರಗಳು ಧರೆಗುರುಳಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಳ್ಳುತ್ತಿದೆ. ಹೆಬ್ಬಾಳದಿಂದ ಯಲಹಂಕ, ಪೀಣ್ಯದಿಂದ ಮಹದೇವಪುರದವರೆಗೆ ಬೆಂಗಳೂರಿಗರು ತೀವ್ರ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬೆಂಗಳೂರು ಉಸ್ತುವಾರಿ ನಾಯಕರು ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವುದಕ್ಕಿಂತ, ‘ಬ್ರ್ಯಾಂಡ್ ಬೆಂಗಳೂರು’ ಮತ್ತು ‘ಕ್ಲೀನ್ ಬೆಂಗಳೂರು’ ಎಂಬ ಹೆಸರಿನಲ್ಲಿ ಪ್ರಚಾರ ಪಡೆಯಲು ಹೆಚ್ಚು ಒತ್ತು ನೀಡುತ್ತಿದ್ದಾರೆ. ಒಂದೆಡೆ ಜನರು ಮಳೆ ನೀರಿನಲ್ಲಿ ಸಿಲುಕಿ ತೊಂದರೆ ಅನುಭವಿಸುತ್ತಿದ್ದರೆ, ಮತ್ತೊಂದೆಡೆ ಮನೆಗಳ ಮುಂದೆ ವಾಹನ ನಿಲ್ಲಿಸುವುದಕ್ಕೂ ₹15,000 ರಿಂದ ₹25,000 ವರೆಗೆ ವಾರ್ಷಿಕ ಪಾರ್ಕಿಂಗ್ ಶುಲ್ಕ ವಿಧಿಸುವ ಪ್ರಸ್ತಾವನೆ ತರಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಖಾಲಿ ನಿವೇಶನ ಸ್ವಚ್ಛಗೊಳಿಸುವ ಹೆಸರಲ್ಲಿ ಮಾಲೀಕರಿಗೆ ದಂಡ, ಪಾರ್ಕಿಂಗ್ ಹಾಗೂ ಕಸಕ್ಕೆ ಪ್ರತ್ಯೇಕ ಶುಲ್ಕ ಹೇರಲಾಗುತ್ತಿದೆ. ಆದರೆ ಮಳೆ ಬಂದಾಗ ನೀರು ಸರಾಗವಾಗಿ ಹರಿಯಲು ಅಗತ್ಯವಿರುವ ಮೂಲಸೌಕರ್ಯ ಎಲ್ಲಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಜನರಿಗೆ ಬೇಕಿರುವುದು ಪ್ರಚಾರದ ಬ್ರ್ಯಾಂಡ್ ಅಲ್ಲ; ಮಳೆ ಬಂದಾಗ ಮುಳುಗದ, ಸಂಚಾರ ಸ್ಥಗಿತವಾಗದ, ಸುರಕ್ಷಿತ ಮತ್ತು ಸುಸಜ್ಜಿತ ನಗರ. ಜನರ ಮೇಲೆ ಹೊಸ ಶುಲ್ಕ ಹಾಗೂ ನಿಯಮಗಳನ್ನು ಹೇರಿ ಖಜಾನೆ ತುಂಬಿಸುವುದನ್ನು ಬಿಟ್ಟು, ಮೊದಲು ಬೆಂಗಳೂರಿನ ಮೂಲಭೂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಿ ಎಂದು ಆರ್. ಅಶೋಕ್ ಸರ್ಕಾರವನ್ನು ಆಗ್ರಹಿಸಿದ್ದಾರೆ.




