ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ 14ನೇ ಆರೋಪಿ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಸ್ವೀಕರಿಸಿರುವ ಕೆಳ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ನಟ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ, ಈ ಅರ್ಜಿಯ ತುರ್ತು ವಿಚಾರಣೆ ನಡೆಸಲು ಹೈಕೋರ್ಟ್ ಮಂಗಳವಾರ ನಿರಾಕರಿಸಿದ್ದು, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.
ಪ್ರದೋಷ್ ಅವರ ಸಾಕ್ಷ್ಯ ವಿಚಾರಣೆ ಬುಧವಾರವೇ ನಿಗದಿಯಾಗಿರುವ ಹಿನ್ನೆಲೆಯಲ್ಲಿ, ದರ್ಶನ್ ಪರ ವಕೀಲರು ಅರ್ಜಿಯ ತುರ್ತು ವಿಚಾರಣೆಗೆ ಮನವಿ ಮಾಡಿದ್ದರು.
11 ಪುಟಗಳ ಅರ್ಜಿ ಸಲ್ಲಿಸಿದ್ದ ಪ್ರದೋಷ್: ಪ್ರಕರಣದ 14ನೇ ಆರೋಪಿ ಪ್ರದೋಷ್, ಸಿಆರ್‌ಪಿಸಿ (CrPC) ಸೆಕ್ಷನ್ 307ರ ಅಡಿಯಲ್ಲಿ 59ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ 11 ಪುಟಗಳ ಅರ್ಜಿ ಸಲ್ಲಿಸಿದ್ದರು. ಕೊಲೆ, ಸಾಕ್ಷ್ಯ ನಾಶ ಮತ್ತು ಎಲ್ಲಾ ಆರೋಪಿಗಳ ಪಾತ್ರದ ಬಗ್ಗೆ 'ಸಂಪೂರ್ಣ ಸತ್ಯ' ಹೇಳುವುದಾಗಿ ತಿಳಿಸಿ ಮಾಫಿ ಸಾಕ್ಷಿಯಾಗಲು ಕೋರಿದ್ದರು.
ಪ್ರಾಸಿಕ್ಯೂಷನ್ ಸಮ್ಮತಿ: ವಿಶೇಷ ಸಾರ್ವಜನಿಕ ಅಭಿಯೋಜಕ (SPP) ಪ್ರಸನ್ನ ಪಿ. ಕುಮಾರ್ ಅವರು ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿ, ಪ್ರದೋಷ್ ಸಂಪೂರ್ಣ ಸತ್ಯ ಹಾಗೂ ಕಾನೂನು ನಿಯಮಗಳನ್ನು ಪಾಲಿಸಿದರೆ ಕ್ಷಮಾದಾನ ನೀಡಲು ಪ್ರಾಸಿಕ್ಯೂಷನ್ ಒಪ್ಪಿಗೆ ಇದೆ ಎಂದು ತಿಳಿಸಿದ್ದರು.
ಜೈಲಿನಲ್ಲಿ ಬೆದರಿಕೆ ಭಯ: ಇತರ ಆರೋಪಿಗಳಿಂದ ತಮಗೆ ಜೀವ ಬೆದರಿಕೆ ಮತ್ತು ಒತ್ತಡ ಹೇರುವ ಸಾಧ್ಯತೆ ಇದೆ ಎಂದು ತಿಳಿಸಿದ್ದ ಪ್ರದೋಷ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ತಮ್ಮನ್ನು ಪ್ರತ್ಯೇಕ ಸೆಲ್‌ಗೆ ಸ್ಥಳಾಂತರಿಸುವಂತೆ ಮನವಿ ಮಾಡಿದ್ದರು.
ಮತ್ತಿಬ್ಬರು ಆರೋಪಿಗಳಿಂದ ಮಾಫಿ ಸಾಕ್ಷಿ ಅರ್ಜಿ ಶಂಕೆ: ವಿಚಾರಣೆ ವೇಳೆ ಆರೋಪಿ ರವಿಶಂಕರ್ (A8) ಮತ್ತು ವಿನಯ್ (A10) ಅವರ ವಕೀಲರು, ತಮ್ಮ ಕಕ್ಷಿದಾರರು ಸಹ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಲು ಉದ್ದೇಶಿಸಿದ್ದಾರೆ ಎಂದು ಕೋರ್ಟ್‌ಗೆ ತಿಳಿಸಿದ್ದಾರೆ.
ದರ್ಶನ್ ವಕೀಲರ ವಿರೋಧ: ದರ್ಶನ್ ಪರ ಹಿರಿಯ ವಕೀಲ ಹಶ್ಮತ್ ಪಾಷಾ ಈ ಪ್ರಕ್ರಿಯೆಯನ್ನು ಬಲವಾಗಿ ವಿರೋಧಿಸಿದ್ದಾರೆ. ಸೂಕ್ತ ಕಾನೂನು ಕಾರ್ಯವಿಧಾನ ಅನುಸರಿಸದೆ ಮತ್ತು ಅರ್ಜಿಯ ಪ್ರತಿಗಳನ್ನು ನೀಡದೆ ಕ್ಷಮಾದಾನ ನೀಡಲು ಬರುವುದಿಲ್ಲ ಎಂದು ವಾದಿಸಿದ್ದಾರೆ.
2024 ರ ಜೂನ್ 9 ರಂದು ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಶವವಾಗಿ ಪತ್ತೆಯಾಗಿದ್ದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರದೋಷ್ ಮಾಫಿ ಸಾಕ್ಷಿಯಾಗಿರುವುದು ನಟ ದರ್ಶನ್ ಹಾಗೂ ಇತರ ಆರೋಪಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.




