ಚಂದ್ರವಳ್ಳಿ ನ್ಯೂಸ್, ಮೈಸೂರು:
ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಮೃತ ಗ್ರಾಹಕನ ಬ್ಯಾಂಕ್ ಖಾತೆ ಹಾಗೂ ಬ್ಯಾಂಕ್ನ ಆಂತರಿಕ ಶಾಖೆಯ ಲಕ್ಷಾಂತರ ರೂಪಾಯಿ ಹಣವನ್ನು ದುರುಪಯೋಗಪಡಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೈಸೂರಿನ ಒಂದನೇ ಸಿಜೆಎಂ ನ್ಯಾಯಾಲಯವು ಎಸ್ಬಿಐ ಬ್ಯಾಂಕ್ನ ಚೀಫ್ ಮ್ಯಾನೇಜರ್ಗೆ 1 ವರ್ಷ ಕಠಿಣ ಸಜೆ ಹಾಗೂ 50,000 ರೂಪಾಯಿ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಚಾಮುಂಡಿಪುರಂ ಎಸ್ಬಿಐ ಶಾಖೆಯ ಮಾಜಿ ಚೀಫ್ ಮ್ಯಾನೇಜರ್ ಅನಿರುದ್ಧ ವಸಂತರಾವ್ ಕುಲಕರ್ಣಿ ಜೈಲುಪಾಲಾದ ಆರೋಪಿಯಾಗಿದ್ದಾರೆ.
ಪ್ರಕರಣದ ವಿವರ: ಚಾಮುಂಡಿಪುರಂ ಎಸ್ಬಿಐ ಬ್ಯಾಂಕ್ನಲ್ಲಿ ಚೀಫ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎ.ವಿ. ಕುಲಕರ್ಣಿ, ಕೃಷ್ಣ ಅಯ್ಯರ್ ಎಂಬ ಗ್ರಾಹಕರು 2005ರ ಏಪ್ರಿಲ್ 7ರಂದೇ ನಿಧನರಾಗಿದ್ದರೂ ಆ ಸಂಗತಿಯನ್ನು ಮರೆಮಾಚಿದ್ದರು. ಮೃತ ವ್ಯಕ್ತಿಯ ಬ್ಯಾಂಕ್ ಖಾತೆಯಲ್ಲಿದ್ದ ಒಟ್ಟು 40,53,000 ರೂಪಾಯಿಗಳನ್ನು 2009ರ ಮೇ 13ರಿಂದ 2011ರ ಡಿಸೆಂಬರ್ 23ರ ನಡುವೆ ಹಂತ ಹಂತವಾಗಿ ತನ್ನ ಹಾಗೂ ತನ್ನ ಮಗನ ಖಾತೆಗೆ ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದರು.
ಇಷ್ಟೇ ಅಲ್ಲದೆ, ಬ್ಯಾಂಕ್ನ ಆಂತರಿಕ ಶಾಖೆಯ ಖಾತೆಯಲ್ಲಿದ್ದ 21,04,127 ರೂಪಾಯಿ ಹಣವನ್ನು ಸಹ ದುರುಪಯೋಗಪಡಿಸಿಕೊಂಡು ವಂಚನೆ ಎಸಗಿದ್ದರು.
ಪೊಲೀಸ್ ತನಿಖೆ ಮತ್ತು ನ್ಯಾಯಾಲಯದ ತೀರ್ಪು:
ಈ ಅಕ್ರಮದ ಕುರಿತು ಮೇಲಧಿಕಾರಿಗಳ ಗಮನಕ್ಕೆ ಬಂದ ಬಳಿಕ ನಡೆದ ಆಂತರಿಕ ವಿಚಾರಣೆಯಲ್ಲಿ ಆರೋಪಿ ತಾನು ಹಣ ಪಡೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದರು. ಈ ಸಂಬಂಧ ಕೆ.ಆರ್. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಂದಿನ ಠಾಣೆಯ ಸಬ್ ಇನ್ಸ್ಪೆಕ್ಟರ್ ಪ್ರಶಾಂತ್ ಅವರು ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ (ಚಾರ್ಜ್ಶೀಟ್) ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ವೇಳೆ ಬ್ಯಾಂಕ್ ಮ್ಯಾನೇಜರ್ ಎಸಗಿದ ವಂಚನೆ ಸಾಬೀತಾಗಿದ್ದು, ನ್ಯಾಯಾಧೀಶರು ಆರೋಪಿಗೆ 1 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 50,000 ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.




