ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ:
ಭಗವಂತನ ನಾಮ ಸ್ಮರಣೆಗಳ ಮೂಲಕ ಜೀವನವನ್ನು ಪವಿತ್ರಗೊಳಿಸಿಕೊಳ್ಳೋಣ. ಹರೇ ರಾಮ, ಹರೇ ಕೃಷ್ಣ ಮಂತ್ರಗಳು ಮನುಷ್ಯನ ಸುಖ ಶಾಂತಿ ನೆಮ್ಮದಿಯನ್ನು ಹೆಚ್ಚಿಸುತ್ತದೆ.
ಕೆಟ್ಟ ಆಲೋಚನೆಗಳನ್ನು ದೂರ ಮಾಡಿ, ಸನ್ಮಾರ್ಗದಲ್ಲಿ ಸಾಗಲು ಸತ್ಸಂಗಗಳು ಮತ್ತು ಭಜನೆಗಳು ತುಂಬಾ ಅಗತ್ಯವೆಂದು ಮೈಸೂರಿನ ಇಸ್ಕಾನ್ ಸಂಸ್ಥೆಯ ಗುರುಗಳಾದ ಮಹಾಪುರಾಣದಾಸ್ ರವರು ತಿಳಿಸಿದರು.
ಅವರು ಜೈ ಹಿಂದ್ ಪ್ರತಿಷ್ಠಾನ, ಋಗ್ವೇದಿ ಯೂತ್ ಕ್ಲಬ್, ಶ್ರೀ ಕೃಷ್ಣ ಪ್ರತಿಷ್ಠಾನ ಋಗ್ವೇದಿ ಕುಟೀರದಲ್ಲಿ ಹಮ್ಮಿಕೊಂಡಿದ್ದ ರಾಧಾಷ್ಟಮಿ ಹಾಗೂ ಸತ್ಸಂಗದ ಕಾರ್ಯಕ್ರಮ ಹಾಗೂ ಶ್ರೀ ರಾಧಾ ಕೃಷ್ಣ ಆರತಿಯನ್ನು ನೆರವೇರಿಸಿ ಮಾತನಾಡಿ ಸಜ್ಜನರ ಸಹವಾಸ ಮತ್ತು ಒಳ್ಳೆಯ ವಿಚಾರಗಳನ್ನು ತಿಳಿಯುವುದು ತುಂಬಾ ಅಗತ್ಯ. ಮನಸ್ಸಿನ ಶಾಂತಿ, ಗೊಂದಲ, ಭಯ, ಕೋಪ, ದ್ವೇಷ ಭಾವಗಳ ದೂರವಾಗಲು ಸತ್ಸಂಗಗಳು ತುಂಬಾ ಸಹಾಯ ಮಾಡುತ್ತದೆ. ಪರಮ ಸತ್ಯವನ್ನು ತಿಳಿಯುವುದೇ ಪೂಜೆಯಾಗಿದೆ. ರಾಧೆ ಶ್ರೀ ಮಹಾಲಕ್ಷ್ಮಿ ಅವತಾರ. ಭಕ್ತಿ ಮತ್ತು ಪ್ರೀತಿಯ ದಿನವಾಗಿ ರಾಧಾಷ್ಟ್ಟಮಿ ಆಚರಿ ಸಲಾಗುತ್ತದೆ.
ನಿಷ್ಕಲ್ಮಶ ಪ್ರೀತಿಯಿಂದ ಭಗವಂತನಿಗೆ ಶರಣಾಗುವುದು ತುಂಬಾ ಅಗತ್ಯವಿದೆ. ರಾಧೆ ಭಕ್ತಿಯ ಪ್ರೀತಿಯ ಸಂಕೇತ. ಉತ್ತರ ಭಾರತದಲ್ಲಿ ರಾಧಾಷ್ಟಮಿಯನ್ನು ತುಂಬಾ ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸುತ್ತಾರೆ. ರಾಧಾಷ್ಟಮಿಯ ಸತ್ಸಂಗವು ನಮ್ಮೆಲ್ಲರಲ್ಲೂ ಭಕ್ತಿಯನ್ನು ಹೆಚ್ಚಿಸಲಿ ಎಂದರು.
ಶ್ರೀ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ಎನ್ ಋಗ್ವೇದಿ ಮಾತನಾಡಿ ಜ್ಞಾನದ ವೃದ್ಧಿಗೆ ಸತ್ಸಂಗ ಸಹಾಯಕ ವಾಗುತ್ತದೆ. ಸಾಮೂಹಿಕ ಭಜನೆ, ಕೀರ್ತನೆ, ಮಂತ್ರ ಪಠಣ ದಿಂದ ಪರಿಸರ ಸರ್ಕಾರಾತ್ಮಕವಾಗಿ ಒಳ್ಳೆಯ ಯೋಚನೆಗಳು ಬಂದು ಪವಿತ್ರವಾದ ಜೀವನವನ್ನು ನಡೆಸಲು ಚೈತನ್ಯವನ್ನು ಶಕ್ತಿಯನ್ನು ಉಂಟುಮಾಡುತ್ತದೆ ಸಾಮೂಹಿಕವಾದ ಸತ್ಸಂಗವು ಹೆಚ್ಚಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಪ್ರತಿಷ್ಠಾನದ ಸದಸ್ಯರಾದ ರಾಮ್ ಪ್ರಸಾದ್, ಮುರುಗೇಶ್,ಭೋಜರಾಜ್, ಜೈಹಿಂದ್ ಪ್ರತಿಷ್ಠಾನದ ಕುಸುಮ ಋಗ್ವೇದಿ, ವಾಣಿಶ್ರೀ, ಯಶಸ್ವಿನಿ, ಶ್ರಾವ್ಯ ಋಗ್ವೇದಿ, ಸುಪ್ರಿಯಾ ಭಾರದ್ವಾಜ್, ಮೈಸೂರು ಇಸ್ಕಾನ್ ಭಕ್ತರು ಇದ್ದರು.
ಹರೇ ರಾಮ,ಹರೇ ಕೃಷ್ಣ ಮಂತ್ರ ಜಪ ಹಾಗೂ ಕೃಷ್ಣ ಆರತಿಯನ್ನು ಮೈಸೂರು ಇಸ್ಕಾನ್ ಸಂಸ್ಥೆಯ ಮಹಾಪುರಾಣ ದಾಸ್ ಹಾಗೂ ಭಕ್ತರು ನೆರವೇರಿಸಿದರು.




