ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದ ಮಾನ ಮರ್ಯಾದೆಯನ್ನು ದೇಶದಾದ್ಯಂತ ಹರಾಜು ಹಾಕುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ.
ಸಿದ್ದರಾಮಯ್ಯ ಅವರ ವಿರುದ್ಧದ ಸ್ಟಿಂಗ್ ಪ್ರಕರಣದಲ್ಲಿ ಕಥೆ, ಚಿತ್ರಕಥೆ, ನಿರ್ದೇಶನ ಹಾಗೂ ನಿರ್ಮಾಣ ಎಲ್ಲವೂ ಕುಮಾರಸ್ವಾಮಿ ಅವರದ್ದೇ ಆಗಿದ್ದು, ರಾಜಕೀಯ ಲಾಭಕ್ಕಾಗಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಲು ಮುಂದಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸ್ಟಿಂಗ್ ಹಿಂದಿರುವ ಆಪ್ತರು: ಕುಮಾರಸ್ವಾಮಿ ಅವರ ಆಪ್ತರಾದ ರಿತೇಶ್ ಪಾಂಡೆ, ವಿನೋದ್ ಶರ್ಮಾ ಹಾಗೂ ಪ್ರಮುಖವಾಗಿ ಸ್ಟಿಂಗ್ ನಡೆಸುವಲ್ಲಿ ನಿಪುಣರಾಗಿರುವ ಪಿಆರ್ ಒ ಪ್ರಜ್ವಲ್ ಪ್ರಸಾದ್ ಈ ಕೃತ್ಯದ ಹಿಂದೆ ಇದ್ದಾರೆ.
ದೆಹಲಿಯಲ್ಲಿ ಅನುಮತಿ ಪಡೆದ ಆರೋಪ: ಕಳೆದ ಆಗಸ್ಟ್ 27ರಂದು ಮೋದಿ ಅವರನ್ನು ಭೇಟಿಯಾಗಿದ್ದ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ, ಈ ಸ್ಟಿಂಗ್ ವಿಚಾರ ಪ್ರಸ್ತಾಪಿಸಿ 'ಗೋ ಹೆಡ್' ಎಂಬ ಅನುಮತಿ ಪಡೆದುಕೊಂಡಿದ್ದಾರೆ.
ಮುಂದಿನ ದಿನಗಳಲ್ಲಿ ಸಾಕ್ಷ್ಯ ಬಿಡುಗಡೆ: ಮೋದಿ ಅವರ ಬಳಿ ಹೆಚ್ಡಿಕೆ ಆಶ್ವಾಸನೆ ನೀಡಿದ್ದ ಕುರಿತ ಆಡಿಯೋ ಸಾಕ್ಷ್ಯವನ್ನು ತನಿಖೆಯ ನಂತರ ಬಹಿರಂಗಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಬಿಜೆಪಿ-ಜೆಡಿಎಸ್ನ 'ಒಂದೇ ಕಲ್ಲಿಗೆ ನಾಲ್ಕು ಹಕ್ಕಿ' ಲೆಕ್ಕಾಚಾರ:
1 ಸಿದ್ದರಾಮಯ್ಯ ಅವರ ಇಮೇಜ್ ಧಕ್ಕೆ: ಅಹಿಂದ ಮತಗಳನ್ನು ಕಾಂಗ್ರೆಸ್ನಿಂದ ದೂರವಾಗಿಸುವುದು.
2 ಡಿ.ಕೆ. ಶಿವಕುಮಾರ್ ತೇಜೋವಧೆ: 2028ರ ಚುನಾವಣೆಯನ್ನು ಗುರಿಯಾಗಿಸಿಕೊಂಡು ಅವರ ವರ್ಚಸ್ಸನ್ನು ಕುಗ್ಗಿಸುವುದು.
3 ಮೈತ್ರಿ ಸರ್ಕಾರ ರಚನೆ: ಕಾಂಗ್ರೆಸ್ಗೆ ಕೆಟ್ಟ ಹೆಸರು ತಂದು 2028ರಲ್ಲಿ ಬಿಜೆಪಿ-ಜೆಡಿಎಸ್ ಅಧಿಕಾರಕ್ಕೆ ತರುವುದು.
4 ಕೈ ನಾಯಕರ ನಡುವೆ ಭಿನ್ನಾಭಿಪ್ರಾಯ: ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ಗೊಂದಲ ಸೃಷ್ಟಿಸಿ ರಾಜಕೀಯ ಲಾಭ ಪಡೆಯುವುದು.
ಸಿನಿಮಾ ರಂಗದಲ್ಲಿದ್ದ ಕುಮಾರಸ್ವಾಮಿ ಅವರಿಗೆ ಕಥೆಯನ್ನು ತಮಗಿಷ್ಟ ಬಂದಂತೆ ತಿರುಗಿಸುವ ಕಲೆ ಗೊತ್ತು ಎಂದು ವ್ಯಂಗ್ಯವಾಡಿದ ಲಕ್ಷ್ಮಣ್, ತನಿಖಾ ತಂಡವು ಈ ಪಿತೂರಿಯ ಹಿಂದಿರುವ ನಿಜವಾದ ಹುನ್ನಾರವನ್ನು ಸದ್ಯದಲ್ಲೇ ಬಯಲಿಗೆಳೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.




