ಚಂದ್ರವಳ್ಳಿ ನ್ಯೂಸ್, ಮಂಗಳೂರು:
ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರುತನಿಖೆ ಆರಂಭವಾಗುವ ಮುನ್ನವೇ ತನಿಖಾ ತಂಡಕ್ಕೆ ದೊಡ್ಡ ಮಟ್ಟದ ಹಿನ್ನಡೆಯಾಗಿದೆ. ಪ್ರಕರಣದ ಮರುತನಿಖೆಗಾಗಿ ರಾಜ್ಯ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡದಿಂದ ತಮ್ಮನ್ನು ಕೈಬಿಡುವಂತೆ ಕೋರಿ ಎಎಸ್ಪಿ ಡಾ. ವೆಂಕಟೇಶ್ ಪ್ರಸನ್ನ ಅವರು ಸರ್ಕಾರಕ್ಕೆ ಅಧಿಕೃತವಾಗಿ ಪತ್ರ ಬರೆದಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಐಜಿಪಿ ಶಶಿಕುಮಾರ್ ನೇತೃತ್ವದಲ್ಲಿ ಉನ್ನತ ಮಟ್ಟದ ಎಸ್ಐಟಿ ತಂಡವನ್ನು ರಚಿಸಿತ್ತು. ಈ ತಂಡದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್ಪಿ) ಡಾ. ವೆಂಕಟೇಶ್ ಪ್ರಸನ್ನ ಕೂಡ ಒಬ್ಬರಾಗಿ ನೇಮಕಗೊಂಡಿದ್ದರು.
ಸೌಜನ್ಯ ತಾಯಿಯ ಆಕ್ಷೇಪವೇ ಕಾರಣ:
ಎಸ್ಐಟಿ ತಂಡದಲ್ಲಿ ವೆಂಕಟೇಶ್ ಪ್ರಸನ್ನ ಅವರ ಸೇರ್ಪಡೆಗೆ ಸೌಜನ್ಯ ಅವರ ತಾಯಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ, ತನಿಖೆಯ ಪಾವಿತ್ರ್ಯತೆ ಮತ್ತು ವಿವಾದಗಳನ್ನು ನಿವಾರಿಸುವ ಉದ್ದೇಶದಿಂದ ಎಎಸ್ಪಿ ಡಾ. ವೆಂಕಟೇಶ್ ಪ್ರಸನ್ನ ಅವರು ಸ್ವಯಂಪ್ರೇರಿತರಾಗಿ ಎಸ್ಐಟಿ ತಂಡದಿಂದ ಹೊರಬರಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಎಸ್ಐಟಿ ತಂಡದ ರಚನೆ: ಐಜಿಪಿ ಶಶಿಕುಮಾರ್ನೇತೃತ್ವದಲ್ಲಿ ರಚಿಸಲಾಗಿರುವ ಈ ವಿಶೇಷ ತನಿಖಾ ತಂಡದಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಮತ್ತು ಡಿಐಜಿ ಸಿ.ಎಚ್. ಸುಧೀರ್ಕುಮಾರ್ರೆಡ್ಡಿ, ಗುಪ್ತದಳದ ಎಸ್ಪಿ ನಿಶಾ ಜೇಮ್ಸ್, ಸಿಐಡಿ ಎಸ್ಪಿ ಲೋಕೇಶ್ ಜಗಲಸಾರ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಎಸ್ಪಿ ವೆಂಕಟೇಶ್ ಪ್ರಸನ್ನ ಸೇರಿದಂತೆ ಪ್ರಮುಖ ನಾಲ್ವರು ಹಿರಿಯ ಅಧಿಕಾರಿಗಳು ಸದಸ್ಯರಾಗಿ ಸ್ಥಾನ ಪಡೆದಿದ್ದರು. ಸದ್ಯ ಎಎಸ್ಪಿ ವೆಂಕಟೇಶ್ ಪ್ರಸನ್ನ ಅವರು ತಂಡದಿಂದ ಹೊರಗುಳಿಯಲು ಮುಂದಾಗಿರುವುದರಿಂದ, ಸರ್ಕಾರ ಮುಂದಿನ ಕ್ರಮ ಏನು ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.




