ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೀವ್ರ ಮಳೆ ಅಭಾವದಿಂದಾಗಿ ಚಿತ್ರದುರ್ಗ ಜಿಲ್ಲೆಯ ಮಳೆಯಾಶ್ರಿತ ಪ್ರದೇಶಗಳಲ್ಲಿ ಜುಲೈ ಕೊನೆಯವರೆಗೂ ಶೇ 80 ರಷ್ಟು ಬಿತ್ತನೆ ಮಾಡಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ‘ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ’ಯ ಬಿತ್ತನೆ ಪೂರ್ವ ಯೋಜನೆ ಅಡಿಯಲ್ಲಿ ಜಿಲ್ಲೆಯ ಆರು ತಾಲ್ಲೂಕುಗಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಧಿಸೂಚಿತ ಬೆಳೆಗಳಿಗೆ ಸಂಬಂಧಿಸಿದಂತೆ ಒಟ್ಟು 1,61,526 ಬೆಳೆ ವಿಮಾದಾರರಿಗೆ ಶೇ 25 ರಷ್ಟು ಬೆಳೆ ವಿಮಾ ಮೊತ್ತ ನೀಡಲು ನಿರ್ಧರಿಸಲಾಗಿದೆ.
ಇದೇ ಸಂದರ್ಭದಲ್ಲಿ ಹೋಬಳಿ ಮಟ್ಟದ ಅಧಿಸೂಚಿತ ಬೆಳೆಗಳಿಗೂ ಬಿತ್ತನೆ ಪೂರ್ವ ಯೋಜನೆಯನ್ನು ಅನ್ವಯಿಸಬೇಕೆಂಬ ರೈತರ ಕೋರಿಕೆಯನ್ನು ಸರ್ಕಾರ ಪುರಸ್ಕರಿಸದಿದ್ದರೂ, ಹೋಬಳಿ ಮಟ್ಟದ ಬೆಳೆಗಳಿಗೆ 'ಋತು ಮಧ್ಯೆ ಪ್ರತಿಕೂಲತೆಯ ಮಧ್ಯಂತರ ಪರಿಹಾರ' ಹಾಗೂ ಬೆಳೆ ಕಟಾವು ಪ್ರಯೋಗ ವರದಿಗಳ ಆಧಾರದ ಮೇಲೆ ವಿಮಾ ಸೌಲಭ್ಯ ಒದಗಿಸಲು ಅವಕಾಶವಿದೆ ಎಂದು ರೈತ ಮುಖಂಡ ಹಾಗೂ ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಸಿ. ಶಿವಲಿಂಗಪ್ಪ, ಮೀರಾಸಾಬಿಹಳ್ಳಿ ಸ್ಪಷ್ಟಪಡಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಟಿ. ರಘುಮೂರ್ತಿ ಅವರ ಸೂಚನೆ ಹಾಗೂ ರೈತರ ಆಗ್ರಹದಂತೆ, ಜಿಲ್ಲಾಧಿಕಾರಿಗಳು ಮತ್ತು ಕೃಷಿ ಇಲಾಖೆಯ ಸಮನ್ವಯದಲ್ಲಿ ಬೆಳೆ ವಿಮಾ ಕಂಪನಿಯ ಸಹಯೋಗದೊಂದಿಗೆ ಸೂಕ್ತ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಇದರನ್ವಯ ಚಳ್ಳಕೆರೆ ತಾಲ್ಲೂಕಿನ 8,832 ತೊಗರಿ ಬೆಳೆ ವಿಮಾದಾರರಿಗೆ ಹಾಗೂ ಉಳಿದ ಐದು ತಾಲ್ಲೂಕುಗಳ ಅಡಿಕೆ ದಾಳಿಂಬೆ ಸೇರಿ ಇತರೆ ತೋಟಗಾರಿಕೆ ಬೆಳೆಗಳಿಗೆ, ಸೂರ್ಯಕಾಂತಿ, ಮುಸುಕಿನ ಜೋಳ, ರಾಗಿ, ನವಣೆ, ಸಜ್ಜೆ ಮತ್ತು ತೊಗರಿ ಬೆಳೆಗಳ 35,000ಕ್ಕೂ ಹೆಚ್ಚು ವಿಮಾದಾರರಿಗೆ ಉತ್ತಮ ಮಧ್ಯಂತರ ವಿಮಾ ಮೊತ್ತ ಲಭ್ಯವಾಗುವಂತೆ ಕೃಷಿ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಶೀಘ್ರ ಬೆಳೆ ಪರಿಹಾರ ಬಿಡುಗಡೆ ಮಾಡಬೇಕು ಅವರು ಆಗ್ರಹಿಸಿದರು.
ಬಿತ್ತನೆ ಪೂರ್ವ ಯೋಜನೆಯ ಶೇ 25 ರಷ್ಟು ಮೊತ್ತ ಹಾಗೂ ಋತು ಮಧ್ಯೆ ಪ್ರತಿಕೂಲತೆಯ ವಿಮಾ ಹಣವನ್ನು ಯಾವುದೇ ವಿಳಂಬವಿಲ್ಲದೆ ರೈತರಿಗೆ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ನೀಡಿದ ಪತ್ರದೊಂದಿಗೆ ಅಕ್ಟೋಬರ್ 9ರಂದು ಕೃಷಿ ಆಯುಕ್ತರಾದ ಡಾ. ಬಿ. ಸಿ. ಸತೀಶ್ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದು, ಸಮಾಲೋಚನೆಗೆ ಸ್ಪಂದಿಸಿದ ಕೃಷಿ ಆಯುಕ್ತರು, ಸರ್ಕಾರದಿಂದ ಅನುದಾನ ಬಿಡುಗಡೆಗೆ ಕೋರಲಾಗಿದ್ದು, ಶೀಘ್ರದಲ್ಲೇ ರೈತರಿಗೆ ವಿಮಾ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಸಿ. ಶಿವಲಿಂಗಪ್ಪ, ಮೀರಾಸಾಬಿಹಳ್ಳಿ ತಿಳಿಸಿದ್ದಾರೆ.




