ಚಂದ್ರವಳ್ಳಿ ನ್ಯೂಸ್, ಮಂಡ್ಯ:
ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಬ್ಇನ್ಸ್ಪೆಕ್ಟರ್ (PSI) ಅವರಿಗೆ ಕಪಾಳಮೋಕ್ಷ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ ಅವರ ಪುತ್ರಿ ಐಶ್ವರ್ಯಾ ಗೌಡ ಅವರು ವಿಡಿಯೋ ಸಂದೇಶದ ಮೂಲಕ ಪಿಎಸ್ಐ ಸವಿತಾ ಪಾಟೀಲ್ ಅವರ ಬಳಿ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ.
ಘಟನೆಯ ಹಿನ್ನೆಲೆ ಏನು?
ಕಳೆದ ಆಗಸ್ಟ್ 12ರಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ಗ್ರಾಮದಲ್ಲಿರುವ ದೇವಾಲಯಕ್ಕೆ ಐಶ್ವರ್ಯಾ ಗೌಡ ಅವರು ತಮ್ಮ ಮಕ್ಕಳೊಂದಿಗೆ ದೇವರ ದರ್ಶನಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಗರ್ಭಗುಡಿಯೊಳಗೆ ಪ್ರವೇಶಿಸುವ ವಿಚಾರವಾಗಿ ಭದ್ರತೆಗೆ ನಿಯೋಜನೆಗೊಂಡಿದ್ದ ಪಿಎಸ್ಐ ಸವಿತಾ ಪಾಟೀಲ್ ಅವರೊಂದಿಗೆ ಐಶ್ವರ್ಯಾ ಗೌಡ ಮಾತಿಗೆ ಮಾತು ಬೆಳೆಸಿ ವಾಗ್ವಾದ ನಡೆಸಿದ್ದರು.
ಈ ವೇಳೆ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಪಿಎಸ್ಐಗೆ ಕಪಾಳಮೋಕ್ಷ ಮಾಡಲಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿತ್ತು.
ಈ ಘಟನೆ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಸಂಬಂಧ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಐಶ್ವರ್ಯಾ ಗೌಡ ವಿರುದ್ಧ ಅಧಿಕೃತವಾಗಿ ಪ್ರಕರಣ ದಾಖಲಾಗಿ ಕಾನೂನು ಪ್ರಕ್ರಿಯೆಗಳು ಮುಂದುವರಿದಿದ್ದವು.
ಕೋರ್ಟ್ ತಾಕೀತು ಹಿನ್ನೆಲೆ ಕ್ಷಮೆಯಾಚನೆ
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, ಪಿಎಸ್ಐ ಸವಿತಾ ಪಾಟೀಲ್ ಅವರ ಬಳಿ ಕ್ಷಮೆ ಕೋರುವಂತೆ ಐಶ್ವರ್ಯಾ ಗೌಡ ಅವರಿಗೆ ತಾಕೀತು ಮಾಡಿತ್ತು. ನ್ಯಾಯಾಲಯದ ಸೂಚನೆ ಹಾಗೂ ಕಾನೂನು ತೊಡಕುಗಳ ಹಿನ್ನೆಲೆಯಲ್ಲಿ ಎಚ್ಚೆತ್ತ ಐಶ್ವರ್ಯಾ ಗೌಡ, ವಿಡಿಯೋ ಬಿಡುಗಡೆ ಮಾಡುವ ಮೂಲಕ ಪಿಎಸ್ಐ ಸವಿತಾ ಪಾಟೀಲ್ ಅವರ ಕ್ಷಮೆ ಕೋರಿದ್ದಾರೆ.
ಕಾನೂನು ಹೋರಾಟ ಹಾಗೂ ನ್ಯಾಯಾಲಯದ ನಿರ್ದೇಶನದ ಮೇರೆಗೆ ನಡೆದಿರುವ ಈ ಕ್ಷಮೆಯಾಚನೆಯು ಈಗ ರಾಜಕೀಯ ಹಾಗೂ ಪೊಲೀಸ್ ವಲಯದಲ್ಲಿ ಮತ್ತೊಮ್ಮೆ ಗಮನ ಸೆಳೆದಿದೆ.




