ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಂದಿನಿ ಹಾಲು ಮತ್ತು ಮೊಸರಿನ ಬೆಲೆ ಏರಿಕೆಯಾದ ಬೆನ್ನಲ್ಲೇ, ರಾಜ್ಯ ಸರ್ಕಾರವು ಸಾರ್ವಜನಿಕರಿಗೆ ಮತ್ತೊಂದು ದರ ಏರಿಕೆಯ ಬಿಸಿ ಮುಟ್ಟಿಸಿದೆ. ಕರ್ನಾಟಕದ ನಾಲ್ಕೂ ಸರ್ಕಾರಿ ರಸ್ತೆ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಹೆಚ್ಚಿಸಲಾಗಿದ್ದು, ಪರಿಷ್ಕೃತ ದರಗಳು ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿವೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಪ್ರಕಟಿಸಿದ್ದಾರೆ.
ಯಾವ ಬಸ್‌ಗೆ ಎಷ್ಟು ದರ ಹೆಚ್ಚಳ? ಬಿಎಂಟಿಸಿ (BMTC): ಬೆಂಗಳೂರಿನ ನಗರ ಸಾರಿಗೆ ದರ ಸರಾಸರಿ ಶೇ. 33 ರಿಂದ ಶೇ. 35 ರಷ್ಟು ಏರಿಕೆಯಾಗಿದೆ.
ಕನಿಷ್ಠ ಪ್ರಯಾಣ ದರ ₹6 ರಿಂದ ₹10 ಕ್ಕೆ ಹೆಚ್ಚಳ. ಗರಿಷ್ಠ ಪ್ರಯಾಣ ದರ ₹35 ರಿಂದ ₹45 ಕ್ಕೆ ಏರಿಕೆ. ಎಸಿ ವಜ್ರ ಬಸ್‌ಗಳ ಗರಿಷ್ಠ ದರ ₹75 ರಿಂದ ₹90 ಕ್ಕೆ ಹೆಚ್ಚಳ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 'ವಾಯುವಜ್ರ' ಬಸ್ ಗರಿಷ್ಠ ದರ ₹405 ರಿಂದ ₹425 ಕ್ಕೆ ಏರಿಕೆ.
ಕೆಎಸ್‌ಆರ್‌ಟಿಸಿ ಮತ್ತು ಇತರ ನಿಗಮಗಳು (KSRTC, KKRTC, NWKRTC):ಟಿಕೆಟ್ ದರದಲ್ಲಿ ಸರಾಸರಿ ಶೇ. 23 ರಷ್ಟು ಹೆಚ್ಚಳ. ಸಾಮಾನ್ಯ ಬಸ್‌ಗಳಲ್ಲಿ ಗರಿಷ್ಠ ₹9 ರವರೆಗೆ ದರ ಹೆಚ್ಚಳವಾಗಲಿದ್ದು, ಹಂತ ಹಂತವಾಗಿ ಜಾರಿಯಾಗಲಿದೆ.
ಕೆಎಸ್‌ಆರ್‌ಟಿಸಿ ಎಕ್ಸ್‌ಪ್ರೆಸ್ ಬಸ್‌ಗಳ ಪ್ರಯಾಣ ದರ ₹81 ರಿಂದ ₹100 ಕ್ಕೆ (ಶೇ. 19 ರಷ್ಟು) ಏರಿಕೆ. ರಾಜಹಂಸ ಮತ್ತು ಐಷಾರಾಮಿ ಎಸಿ ಬಸ್‌ಗಳ ದರವನ್ನು ಮಾರುಕಟ್ಟೆಯ ಸ್ಪರ್ಧೆಗೆ ಅನುಗುಣವಾಗಿ ನಿಗದಿಪಡಿಸಲಾಗಿದೆ.
ದರ ಏರಿಕೆಗೆ ಸರ್ಕಾರದ ಸಮರ್ಥನೆ:
ಇಂಧನ ಬೆಲೆ ಏರಿಕೆ ಮತ್ತು ಸಾರಿಗೆ ನಿಗಮಗಳ ನಷ್ಟವನ್ನು ಸರಿದೂಗಿಸಲು ಈ ತೀರ್ಮಾನ ಅನಿವಾರ್ಯವಾಗಿದೆ ಎಂದು ಸಾರಿಗೆ ಸಚಿವರು ಸ್ಪಷ್ಟಪಡಿಸಿದ್ದಾರೆ. "ಡೀಸೆಲ್ ದರ ಹೆಚ್ಚಿರುವುದರಿಂದ ನಾಲ್ಕೂ ನಿಗಮಗಳು ನಷ್ಟದಲ್ಲಿವೆ. ನೆರೆಯ ತಮಿಳುನಾಡು ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಇಂದಿಗೂ ಪ್ರಯಾಣ ದರ ಕಡಿಮೆಯಿದೆ," ಎಂದು ಅವರು ತಿಳಿಸಿದರು.
'ಶಕ್ತಿ' ಯೋಜನೆಗೆ ಇಲ್ಲ ಅಡಚಣೆ: ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಐಷಾರಾಮಿಯಲ್ಲದ ಸರ್ಕಾರಿ ಬಸ್‌ಗಳಲ್ಲಿ ನೀಡಲಾಗುತ್ತಿರುವ ಉಚಿತ ಪ್ರಯಾಣ ಸೌಲಭ್ಯ ಮುಂದುವರಿಯಲಿದೆ. ಉಚಿತ ಪ್ರಯಾಣದಿಂದ ನಿಗಮಗಳಿಗೆ ನಷ್ಟವಾಗುತ್ತಿಲ್ಲ, ಮಹಿಳೆಯರ ಟಿಕೆಟ್ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ. ಪ್ರಸ್ತುತ ಡೀಸೆಲ್ ದರ ಹಾಗೂ ನಿರ್ವಹಣಾ ವೆಚ್ಚ ಹೆಚ್ಚಾಗಿರುವುದರಿಂದ ಮಾತ್ರವೇ ಈ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಸಚಿವರು ವಿವರಣೆ ನೀಡಿದ್ದಾರೆ.




