ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವೆ ಸಮನ್ವಯ ಸಾಧಿಸಿ, ಕಬ್ಬು ಬೆಳೆಗಾರರ ಸಮಸ್ಯೆಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು.
ರೈತರ ಹಿತರಕ್ಷಣೆಗೆ ಕರೆ: "ಕಾರ್ಖಾನೆಗಳಿಲ್ಲದಿದ್ದರೆ ರೈತರಿಗೆ ತೊಂದರೆ, ರೈತರಿಲ್ಲದಿದ್ದರೆ ಕಾರ್ಖಾನೆಗಳಿಲ್ಲ. ಹೀಗಾಗಿ ಸಕ್ಕರೆ ಕಾರ್ಖಾನೆಗಳು ರೈತರ ವಿಷಯದಲ್ಲಿ ಹೃದಯ ಶ್ರೀಮಂತಿಕೆ ತೋರಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು" ಎಂದು ಮುಖ್ಯಮಂತ್ರಿಗಳು ಸೂಚಿಸಿದರು.
ಪ್ರಮುಖರ ಭಾಗಿ: 2 ಗಂಟೆಗೂ ಹೆಚ್ಚು ಕಾಲ ನಡೆದ ಈ ಸಭೆಯಲ್ಲಿ ಸಚಿವರಾದ ಎಂ.ಬಿ.ಪಾಟೀಲ್, ಸತೀಶ ಜಾರಕಿಹೊಳಿ ಸೇರಿದಂತೆ ಹಲವು ನಾಯಕರು ಹಾಗೂ ಪ್ರಭಾಕರ ಕೋರೆ, ಸಂಗಮೇಶ ನಿರಾಣಿ ಸೇರಿದಂತೆ ಸುಮಾರು 81 ಸಕ್ಕರೆ ಕಾರ್ಖಾನೆಗಳ ಮಾಲೀಕರು ಪಾಲ್ಗೊಂಡಿದ್ದರು.
ಕೇಂದ್ರದ ಮಟ್ಟದಲ್ಲಿ ಚರ್ಚೆ: ಎಥನಾಲ್, ಮೊಲಾಸಿಸ್ ಹಾಗೂ ಕಬ್ಬಿನ ಬೆಲೆ ನಿಗದಿಗೆ ಸಂಬಂಧಿಸಿದಂತೆ ರಾಷ್ಟ್ರ ಮಟ್ಟದಲ್ಲಿ ತೀರ್ಮಾನವಾಗಬೇಕಿದೆ. ಈ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರೊಂದಿಗೆ ಚರ್ಚಿಸಿ ಸೂಕ್ತ ಪರಿಹಾರಕ್ಕೆ ಒತ್ತಡ ಹೇರಲಾಗುವುದು ಎಂದರು.
ರೈತರ ಬೇಡಿಕೆ: ಕಳೆದ 10 ವರ್ಷಗಳಿಂದ ಸಕ್ಕರೆ ಬೆಲೆ ಏರಿಕೆಯಾಗದ ಹಿನ್ನೆಲೆಯಲ್ಲಿ ರೈತರಿಗೆ ನಷ್ಟವಾಗುತ್ತಿದ್ದು, ಪ್ರತಿ ಟನ್ ಕಬ್ಬಿಗೆ ₹6,000 ವರೆಗೆ ಬೆಲೆ ನಿಗದಿಪಡಿಸುವಂತೆ ರೈತರು ಮನವಿ ಮಾಡಿದ್ದಾರೆ.
ಸಂಗಮೇಶ ನಿರಾಣಿ ಪ್ರತಿಕ್ರಿಯೆ: ರೈತರು, ಕಾರ್ಖಾನೆಗಳು ಮತ್ತು ಸರ್ಕಾರ ಮೂರೂ ವಿಭಾಗಗಳಿಗೆ ಅನುಕೂಲವಾಗುವಂತೆ ಚರ್ಚೆ ನಡೆದಿದ್ದು, ಸಂಜೆ ನಡೆಯಲಿರುವ ಮತ್ತೊಂದು ಹಂತದ ಸಭೆಯಲ್ಲಿ ಅಂತಿಮ ಪರಿಹಾರ ಸಿಗುವ ಭರವಸೆ ಇದೆ ಎಂದು ಕಾರ್ಖಾನೆ ಮಾಲೀಕ ಸಂಗಮೇಶ ನಿರಾಣಿ ತಿಳಿಸಿದರು.




