ಚಂದ್ರವಳ್ಳಿ ನ್ಯೂಸ್, ಶಿರಾ
ತುಮಕೂರು ಜಿಲ್ಲೆ ಸೇರಿದಂತೆ ತಾಲೂಕಿನಲ್ಲಿ ಉಂಟಾಗಿರುವ ತೀವ್ರ ಮಳೆ ಕೊರತೆ ಮತ್ತು ಬರದ ನೈಜ ಪರಿಸ್ಥಿತಿಯನ್ನು ಮನಗಂಡು, ಕೇಂದ್ರ ಸರ್ಕಾರದಿಂದ ಹೆಚ್ಚಿನ ಪರಿಹಾರ ಬಿಡುಗಡೆ ಮಾಡುವಂತೆ ಶಿರಾ ಶಾಸಕ ಹಾಗೂ ನವದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಅವರು ಕೇಂದ್ರದ ಬರ ಅಧ್ಯಯನ ತಂಡಕ್ಕೆ ಬಲವಾಗಿ ಆಗ್ರಹಿಸಿದ್ದಾರೆ.
ಮಳೆ ಕೊರತೆಯಿಂದ ತತ್ತರಿಸಿರುವ ರೈತರ ಹಿತರಕ್ಷಣೆಗಾಗಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ಅಂತರ್-ಸಚಿವಾಲಯದ ಕೇಂದ್ರ ತಂಡವು ಶಿರಾದಲ್ಲಿ ನಡೆಸಿದ ಸಭೆಯಲ್ಲಿ ಅವರು ಈ ಕೆಳಗಿನ ಪ್ರಮುಖ ವಿಷಯಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ.
ಬೆಳೆ ನಷ್ಟ ಹಾಗೂ ಇನ್ಪುಟ್ ಸಬ್ಸಿಡಿ: ತಾಲೂಕಿನಲ್ಲಿ ಮಳೆ ಕೈಕೊಟ್ಟಿದ್ದರಿಂದ ರೈತರು ಬೆಳೆ ಕಳೆದುಕೊಂಡಿದ್ದು, ಕೂಡಲೇ ಹೆಚ್ಚಿನ ಇನ್ಪುಟ್ ಸಬ್ಸಿಡಿ ಹಾಗೂ ಪರಿಹಾರ ಒದಗಿಸುವುದು.
ಕುಡಿಯುವ ನೀರು ಮತ್ತು ಮೇವು: ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸುವುದು ಹಾಗೂ ಜಾನುವಾರುಗಳಿಗೆ ಮುಂದಿನ ದಿನಗಳಿಗೆ ಬೇಕಾಗುವ ಮೇವು ಸಂಗ್ರಹದ ಕುರಿತು ಕೈಗೊಂಡಿರುವ ತುರ್ತು ಕ್ರಮಗಳ ವಿವರಿಸಲಾಗಿದೆ.
ಗುಳೆ ತಡೆ ಹಾಗೂ ಬೆಳೆ ವಿಮೆ: ರೈತರು ಮತ್ತು ಗ್ರಾಮೀಣ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಗುಳೆ ಹೋಗುವುದನ್ನು ತಡೆಯಲು ತೆಗೆದುಕೊಂಡಿರುವ ಹೆಜ್ಜೆಗಳು ಮತ್ತು ರೈತರ ಬೆಳೆ ವಿಮೆ ನೋಂದಣಿ ಪ್ರಕ್ರಿಯೆಯ ಬಗ್ಗೆ ಸಮಗ್ರ ಮಾಹಿತಿ ನೀಡಲಾಗಿದೆ.
ರಾಜ್ಯದ ಮನವಿ: ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಸಲ್ಲಿಸಿರುವ ಸಮಗ್ರ ಮನವಿಯ ಅಂಶಗಳನ್ನು ಕೇಂದ್ರ ತಂಡದ ಮುಂದಿಟ್ಟು, ಕೂಡಲೇ ಎನ್ಡಿಆರ್ಎಫ್ ನಿಧಿಯಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ಒತ್ತಾಯಿಸಲಾಗಿದೆ.




