ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಶೇಷ ಅಭಿಯಾನದ ಮೂಲಕ ಎಸ್‌ಐಆರ್ ನಂತರದ ಗೈರು, ಸ್ಥಳಾಂತರ, ಮೃತ ಹಾಗೂ ನಕಲಿ ಮತ್ತಿತರ ಮತದಾರರ ಪಟ್ಟಿ ಮರುಪರಿಶೀಲನೆ ನಡೆಸಲು ಮತ್ತು ಹೆಸರು ಬಿಟ್ಟುಹೋದ ಅರ್ಹ ಮತದಾರರ ಹೆಸರನ್ನು ಮರು ಸೇರ್ಪಡೆ ಮಾಡಲು ಭಾರತ ಚುನಾವಣಾ ಆಯೋಗ ಆದೇಶಿಸಿರುವುದು ಇಡೀ ದೇಶದ ಮತದಾರರ ಹಕ್ಕಿಗೆ ಸಂದ ದೊಡ್ಡ ಜಯ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ವತಿಯಿಂದ ನಿನ್ನೆ ರಾಜ್ಯ ಚುನಾವಣಾ ಆಯೋಗದ ಎದುರು ಹಮ್ಮಿಕೊಳ್ಳಲಾಗಿದ್ದ ಧರಣಿ ಸತ್ಯಾಗ್ರಹದ ಪರಿಣಾಮವಾಗಿ ಕೇಂದ್ರ ಚುನಾವಣಾ ಆಯೋಗವು ರಾತ್ರೋರಾತ್ರಿ ಈ ಮಹತ್ವದ ಆದೇಶ ಹೊರಡಿಸಿದೆ. ಇದನ್ನು ನಾವು ಸ್ವಾಗತಿಸುತ್ತೇವೆ. ಇದು ನಮ್ಮ ಪಕ್ಷದ ಗೆಲುವು ಮಾತ್ರವಲ್ಲ, ಅರ್ಹ ಮತದಾರರ ಹಕ್ಕು ಕಸಿಯುವ ಸಂಚಿನ ವಿರುದ್ಧ ಕರ್ನಾಟಕ ಹಾಗೂ ಇಡೀ ದೇಶದ ಮತದಾರರು ಸಾಧಿಸಿರುವ ಐತಿಹಾಸಿಕ ವಿಜಯ ಎಂದು ಹೇಳಿದರು.
ಚುನಾವಣಾ ಆಯೋಗದ ಹೊಸ ಮಾರ್ಗಸೂಚಿಗಳು: ಸಾಮೂಹಿಕವಾಗಿ ಹೆಸರು ತೆಗೆದುಹಾಕಿರುವ ದೂರುಗಳ ಬಗ್ಗೆ ಗಮನಹರಿಸಲು, ಫಾರ್ಮ್-7ರ ಮೂಲಕ ಯಾವುದೇ ಮತವನ್ನು ಡಿಲೀಟ್ ಮಾಡದಂತೆ ಆಯೋಗ ಸೂಚಿಸಿದೆ. ಮೊದಲ ಬಾರಿಗೆ ಮತದಾರರಾಗುವ ಯುವಕರು, ರಾತ್ರಿ ಆಶ್ರಯ ತಾಣಗಳಲ್ಲಿ ವಾಸಿಸುವ ಕಾರ್ಮಿಕರು ಹಾಗೂ ನಿರಾಶ್ರಿತರಿಗಾಗಿ ವಿಶೇಷ ಹಾಗೂ ಬೂತ್ ಮಟ್ಟದ ಶಿಬಿರಗಳನ್ನು ಆಯೋಜಿಸಲು ಬಿಎಲ್‌ಒ ಗಳಿಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ.
ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ: ಸಮಾಜದ ದುರ್ಬಲ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರ ಮತಗಳನ್ನು ತೆಗೆದುಹಾಕಲು ಬಿಜೆಪಿಯವರು ಅರ್ಜಿಗಳನ್ನು ನೀಡಿರುವುದು ನಾಚಿಕೆಗೇಡಿನ ಸಂಗತಿ. ಇದು ಜಾತಿ-ಧರ್ಮಗಳ ನಡುವೆ ಕಂದಕ ಸೃಷ್ಟಿಸುವ ಕ್ರಿಮಿನಲ್ ಕೃತ್ಯ. ಸುಮಾರು 25,000 ಅರ್ಜಿಗಳನ್ನು ನೀಡಿರುವುದಾಗಿ ಅವರೇ ಒಪ್ಪಿಕೊಂಡಿದ್ದು, ಇದು ಅವರ ಪಿತೂರಿಯ ತಪ್ಪೊಪ್ಪಿಗೆಯಾಗಿದೆ. ತಕ್ಷಣವೇ ಇವರ ವಿರುದ್ಧ ರಾಷ್ಟ್ರಮಟ್ಟದಲ್ಲಿ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಮುಖಂಡತ್ವ: ಮತಗಳ್ಳತನದ ವಿರುದ್ಧ ಫ್ರೀಡಂ ಪಾರ್ಕ್‌ನಲ್ಲಿ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬಂದು ಹೋರಾಟ ಆರಂಭಿಸಿದ್ದರು. ಕಾರ್ಯಕಾರಿ ಸಮಿತಿಯಲ್ಲಿ ಅವರು ನಮಗೆ ಮಾರ್ಗದರ್ಶನ ನೀಡಿದ್ದಾರೆ. 'ಸಿಟಿಜನ್ಸ್ ಫೋರಂ' ಹಾಗೂ ಹೋರಾಟಗಾರರ ವಿಶೇಷ ತಂಡ ರಾಜ್ಯಾದ್ಯಂತ ಪ್ರವಾಸ ಮಾಡಿ ಸಂಗ್ರಹಿಸಿದ ದತ್ತಾಂಶದ ಆಧಾರದ ಮೇರೆಗೆ ಈ ಅಕ್ರಮವನ್ನು ಬಯಲಿಗೆಳೆಯಲಾಗಿದೆ ಎಂದು ತಿಳಿಸಿದರು.
ಕರ್ತವ್ಯ ನಿರ್ವಹಣೆಗೆ ಬದ್ಧ: ಕರ್ನಾಟಕದ ಪ್ರತಿಯೊಬ್ಬ ಪ್ರಜೆಯ ಮತ ಹಾಗೂ ಸಂವಿಧಾನಾತ್ಮಕ ಸಂಸ್ಥೆಯನ್ನು ರಕ್ಷಿಸುವುದು ಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯ. ಯಾರೇ ದೂರು ನೀಡಲಿ, ಅದಕ್ಕೆ ನಾನು ಹೆದರುವುದಿಲ್ಲ. ಬಿಜೆಪಿಯವರ ತಂತ್ರ, ಕುತಂತ್ರಗಳ ಬಂಡವಾಳವನ್ನು ಬಯಲು ಮಾಡಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಸತ್ಯಗಳು ಹೊರಬರಲಿವೆ ಎಂದು ಸಿಎಂ ಸವಾಲು ಹಾಕಿದರು.




