ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ನಾನು ಗೌರವದಿಂದ ಕೈ ಮುಗಿದು ಕೇಳುತ್ತೇನೆ. ಇರೋ ಜಾಗಕ್ಕೆ ಜೆಲ್ಲಿ ಹಾಕಿ ಅಂದ್ರೆ ಏನೇನೋ ನೆಪ ಹೇಳ್ತೀರಲ್ರಿ?" ಹೀಗಂತ ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಸಚಿವ ಕೃಷ್ಣ ಬೈರೇಗೌಡ ಅವರು ತರಾಟೆಗೆ ತೆಗೆದುಕೊಂಡರು. ಬುಧವಾರ ನಡೆದ ಅತ್ತಿಬೆಲೆ-ಹೊಸಕೋಟೆ ರಸ್ತೆ ಪರಿಶೀಲನಾ ಸಂದರ್ಭದಲ್ಲಿ ಅವರು ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು.
ಬುಧವಾರ ತಮ್ಮ ತಂಡದೊಂದಿಗೆ ಸರ್ಜಾಪುರ ಸರ್ಕಲ್ನಿಂದ ಸೇಂಟ್ ಜಾನ್ಸ್ ಆಸ್ಪತ್ರೆ ವರೆಗಿನ ರಸ್ತೆಯನ್ನು ಪರಿಶೀಲಿಸಿದ ಸಚಿವರು, ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು. ಈ ವೇಳೆ ನಡೆದ ಪ್ರಮುಖ ಬೆಳವಣಿಗೆಗಳ ವಿವರ ಇಲ್ಲಿದೆ.
ಕೆಆರ್ಐಡಿಎಲ್ ಅಧಿಕಾರಿಗೆ ತರಾಟೆ: "ಗೌರವದಿಂದ ಕೈಮುಗಿದು ಕೇಳುತ್ತೇನೆ, ಭೂಸ್ವಾಧೀನ ಮತ್ತೆ ಮಾಡಿ. ಇರುವ ಜಾಗದಲ್ಲಿ ಜಲ್ಲಿ ಹಾಕಿ ರಸ್ತೆ ಸರಿಪಡಿಸಿ. ಅದನ್ನು ಕೇಳಿದರೆ ಹತ್ತು ನೆಪ ಹೇಳುತ್ತೀರಲ್ವಾ? ನಾನೇ ಬಂದು ಕೆಲಸ ಮಾಡಲು ಹೇಳಬೇಕಾ?" ಎಂದು ಕೆಆರ್ಐಡಿಎಲ್ ಅಧಿಕಾರಿಯನ್ನು ಸಚಿವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಮೆಟ್ರೋ ಹಾಗೂ ಒಳಚರಂಡಿ ಕಾಮಗಾರಿ: ದೊಮ್ಮಸಂದ್ರ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ಸಾರ್ವಜನಿಕರಿಗೆ ಟ್ರಾಫಿಕ್ ಕಿರಿಕಿರಿ ಉಂಟಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಿದರು. ಅಲ್ಲದೆ, ಮಳೆನೀರು ಸರಾಗವಾಗಿ ಹರಿಯಲು ವ್ಯವಸ್ಥಿತ ಒಳಚರಂಡಿ ನಿರ್ಮಾಣ ಕಾಮಗಾರಿಯನ್ನು ಶೀಘ್ರವಾಗಿ ನಡೆಸುವಂತೆ ಮೆಟ್ರೋ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅತಿಕ್ರಮಣ ಹಾಗೂ ಬೆಸ್ಕಾಂಗೆ ತರಾಟೆ: ಟ್ರಾಫಿಕ್ ಸಮಸ್ಯೆ ಇರುವ ಪ್ರದೇಶದಲ್ಲಿ ಅಂಗಡಿಯವರು ರಸ್ತೆಯನ್ನು ನಾಲ್ಕಾರು ಅಡಿಗಳಷ್ಟು ಅತಿಕ್ರಮಿಸಲು ಅವಕಾಶ ನೀಡಿದ್ದು ಏಕೆ ಎಂದು ಅಧಿಕಾರಿಗಳನ್ನು ಖಡಕ್ ಆಗಿ ಪ್ರಶ್ನಿಸಿದರು. ಗುಂಜೂರು ಗ್ರಾಮದಲ್ಲಿ ರಸ್ತೆ ಪಕ್ಕದಲ್ಲೇ ಅಪಾಯಕಾರಿ ರೀತಿಯಲ್ಲಿರುವ ಟ್ರಾನ್ಸ್ಫಾರ್ಮರ್ ಅನ್ನು ಸ್ಥಳಾಂತರಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ ಅವರು, "ಟ್ರಾನ್ಸ್ಫಾರ್ಮರ್ ಹಾಕೋಕೆ ನಿಮಗೆ ರಸ್ತೆ ತಿರುವೇ ಆಗಬೇಕಾ?" ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವರ್ತೂರು ಕೆರೆ ಏರಿ ರಸ್ತೆ ಪರಿಶೀಲನೆ: ವರ್ತೂರು ಕೆರೆ ಏರಿ ರಸ್ತೆಯಲ್ಲಿ ಸಾಕಷ್ಟು ಜಾಗವಿದ್ದರೂ ಭೂಸ್ವಾಧೀನದ ಅವಶ್ಯಕತೆಯೇನು? ಇಷ್ಟು ಜಾಗದಲ್ಲಿ ರಸ್ತೆ ಅಭಿವೃದ್ಧಿಪಡಿಸಲು ಯಾಕಾಗುವುದಿಲ್ಲ? ಎಂದು ಪ್ರಶ್ನಿಸಿ ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತನಿಖೆ ಹಾಗೂ ಪರಿಶೀಲನೆಗೆ ಒಳಪಡಿಸಿದರು.
ಸಚಿವರ ಸಕ್ರಿಯ ಕಾರ್ಯವೈಖರಿಗೆ ಸಾರ್ವಜನಿಕ ಮೆಚ್ಚುಗೆ:
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಚಿವರಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಕೃಷ್ಣ ಬೈರೇಗೌಡ ಅವರು ಸದಾ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿರಂತರವಾಗಿ ಕ್ಷೇತ್ರ ಹಾಗೂ ರಸ್ತೆಗಳ ಪರಿಶೀಲನಾ ರೌಂಡ್ಸ್ಹೋಗುವ ಮೂಲಕ ನಿರ್ಲಕ್ಷ್ಯ ತೋರುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.
ಬೆಂಗಳೂರು ನಗರದಲ್ಲಿ ಫುಟ್ಪಾತ್, ರಸ್ತೆ, ಮೆಟ್ರೋ ಹಾಗೂ ಇತರ ಮೂಲಸೌಕರ್ಯ ಅಭಿವೃದ್ದಿ ಕಾರ್ಯಗಳಿಗೆ ಅವರು ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಜಿಬಿಎ ವ್ಯಾಪ್ತಿಯ ಹೊರಗಿನ ನಗರಗಳ ಅಭಿವೃದ್ಧಿಗೂ ಒತ್ತು ನೀಡುವುದಾಗಿ ತಿಳಿಸಿದ್ದಾರೆ. ಸಚಿವರ ಈ ದಿಢೀರ್ ಭೇಟಿ ಹಾಗೂ ಕಠಿಣ ಕಾರ್ಯವೈಖರಿಯು ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.




