ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷ ಗಮನಾರ್ಹ ಗೆಲುವು ಸಾಧಿಸಿದ ಬೆನ್ನಲ್ಲೇ, ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಅವರು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಮೆರಿಕದಲ್ಲಿ ಸಂಭವಿಸಿರುವ ರಾಜಕೀಯ ಬದಲಾವಣೆ ಶೀಘ್ರದಲ್ಲೇ ಭಾರತದಲ್ಲೂ ಮರುಕಳಿಸಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ನವೆಂಬರ್ 3ರಂದು ನಡೆದ ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷವು ರಿಪಬ್ಲಿಕನ್ ಪಕ್ಷದ ಸಾಂಪ್ರದಾಯಿಕ ಭದ್ರಕೋಟೆಗಳಲ್ಲೂ ಅಭೂತಪೂರ್ವ ಮುನ್ನಡೆ ಹಾಗೂ ಗೆಲುವು ಸಾಧಿಸಿದೆ. ಈ ಬೆಳವಣಿಗೆಯನ್ನು ಉಲ್ಲೇಖಿಸಿ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಶಮಾ ಮೊಹಮ್ಮದ್, ಪ್ರಧಾನಿ ಮೋದಿ ಅವರ ರಾಜಕೀಯ ವ್ಯವಸ್ಥೆಯನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.
ಕಾಂಗ್ರೆಸ್ ನಾಯಕಿ ಎಕ್ಸ್ ಪೋಸ್ಟ್ನಲ್ಲಿ ಏನಿದೆ?
"ಅಮೆರಿಕದ ಮಧ್ಯಂತರ ಚುನಾವಣೆ ಜಗತ್ತಿಗೆ ಒಂದು ಸ್ಪಷ್ಟ ಸಂದೇಶ ನೀಡಿದೆ. ಭ್ರಷ್ಟಾಚಾರದಲ್ಲಿ ತೊಡಗಿರುವವರು, ಆರ್ಥಿಕತೆಯ ಬಗ್ಗೆ ಸುಳ್ಳು ಮಾಹಿತ ನೀಡುವವರು ಮತ್ತು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವವರನ್ನು ಜನರು ಅಧಿಕಾರದಿಂದ ಕಿತ್ತೊಗೆಯುತ್ತಾರೆ. 1932ರ ನಂತರ ಇದೇ ಮೊದಲ ಬಾರಿಗೆ ಕಾನ್ಸಾಸ್ನಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಜಯಗಳಿಸಿದ್ದಾರೆ. ಸರ್ವಾಧಿಕಾರಿ ಧೋರಣೆಯಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದಾಗ ಅಸಾಧ್ಯವಾದದ್ದೂ ಸಾಧ್ಯವಾಗುತ್ತದೆ. ಭಾರತದಲ್ಲೂ ಶೀಘ್ರದಲ್ಲೇ ಇಂತಹದ್ದೇ ಬದಲಾವಣೆ ಕಾಣ ಸಿಗಲಿದೆ."
ಕಾನ್ಸಾಸ್ನಲ್ಲಿ ಐತಿಹಾಸಿಕ ಗೆಲುವು: 1932ರ ನಂತರ ಮೊದಲ ಬಾರಿಗೆ ಕಾನ್ಸಾಸ್ ರಾಜ್ಯದ ಸೆನೆಟ್ ಸ್ಥಾನವನ್ನು ಡೆಮಾಕ್ರಟಿಕ್ ಪಕ್ಷ ತನ್ನದಾಗಿಸಿಕೊಂಡಿದೆ. ಡೆಮಾಕ್ರಟಿಕ್ ಅಭ್ಯರ್ಥಿ ಆಡಂ ಹ್ಯಾಮಿಲ್ಟನ್ ಅವರು ರಿಪಬ್ಲಿಕನ್ ಪಕ್ಷದ ಹಾಲಿ ಸದಸ್ಯ ರೋಜರ್ ಮಾರ್ಷಲ್ ಅವರನ್ನು ಪರಾಭವಗೊಳಿಸಿದ್ದಾರೆ.
ಭದ್ರಕೋಟೆಗಳಲ್ಲಿ ಬಿರುಕು: ಟೆಕ್ಸಾಸ್, ಅಯೋವಾ ಸೇರಿದಂತೆ ರಿಪಬ್ಲಿಕನ್ ಪಕ್ಷದ ಭದ್ರಕೋಟೆ ಎನಿಸಿಕೊಂಡಿದ್ದ ಹಲವು ರಾಜ್ಯಗಳಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿಗಳು ಸೆನೆಟ್ ಹಾಗೂ ರಾಜ್ಯಪಾಲರ ಹುದ್ದೆಗಳ ಸ್ಪರ್ಧೆಯಲ್ಲಿ ಮೇಲುಗೈ ಸಾಧಿಸಿದ್ದಾರೆ.
ಅಮೆರಿಕದ ರಾಜಕೀಯ ತಿರುವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ವಕ್ತಾರೆ ನೀಡಿರುವ "ಭಾರತದಲ್ಲೂ ಶೀಘ್ರದಲ್ಲೇ ಬದಲಾವಣೆ" ಎಂಬ ಹೇಳಿಕೆ ಇದೀಗ ದೇಶದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.




