ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಷ್ಟ್ರಗೀತೆ ‘ಜನ ಗಣ ಮನ’ದಂತೆ ‘ವಂದೇ ಮಾತರಂ’ ಹಾಡುವುದನ್ನು ಕಡ್ಡಾಯಗೊಳಿಸಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ಸೂಚಿಸಿ ಹೊರಡಿಸಿರುವ ಸುತ್ತೋಲೆಯನ್ನು ಸಮರ್ಥಿಸಿಕೊಂಡಿರುವ ಸರ್ಕಾರ, ರಾಷ್ಟ್ರಗೀತೆಗೆ ಇರುವ ಕಡ್ಡಾಯ ನಿಯಮಗಳು ರಾಷ್ಟ್ರೀಯ ಗೀತೆಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ರಾಷ್ಟ್ರೀಯ ಗೀತೆಯ ಆರೂ ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸುವ ಕುರಿತ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಮುಂದೂಡಿದೆ. ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ಟಿ.ಪಿ. ವಿವೇಕಾನಂದ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ನೀಡಿದೆ.
ಪ್ರಕರಣದ ಹಿನ್ನೆಲೆ ಮತ್ತು ವಾದ-ಪ್ರತಿವಾದ: ಸೆಪ್ಟೆಂಬರ್ 8ರಂದು ರಾಜ್ಯ ಸರ್ಕಾರ ಸುತ್ತೋಲೆಯೊಂದನ್ನು ಹೊರಡಿಸಿ, ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಅಥವಾ ರಾಜ್ಯಪಾಲರು ಭಾಗವಹಿಸುವ ಪ್ರಮುಖ ಕಾರ್ಯಕ್ರಮಗಳನ್ನು ಹೊರತುಪಡಿಸಿ, ಉಳಿದೆಲ್ಲಾ ರಾಜ್ಯ ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎಂದು ನಿರ್ದೇಶಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ಮೂಲದ ವಕೀಲ ಗಿರೀಶ್ ಭಾರದ್ವಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು. "ರಾಜ್ಯ ಸಚಿವ ಸಂಪುಟವು ಯಾವುದೇ ಕಾನೂನು ಅಭಿಪ್ರಾಯ ಪಡೆಯದೇ ಈ ನಿರ್ಧಾರ ಕೈಗೊಂಡಿದೆ. ಕೇಂದ್ರ ಸರ್ಕಾರದ ನಿರ್ದೇಶನವನ್ನು ಉಲ್ಲಂಘಿಸಿ ಆರು ಚರಣಗಳಿರುವ ಗೀತೆಯನ್ನು ಎರಡು ಚರಣಕ್ಕೆ ಸೀಮಿತಗೊಳಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ" ಎಂದು ಅರ್ಜಿದಾರರ ಪರ ವಾದಿಸಲಾಯಿತು.
ಇದಕ್ಕೆ ಧ್ವನಿಗೂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್, "ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆಯ ತಿದ್ದುಪಡಿಯಂತೆ ‘ವಂದೇ ಮಾತರಂ’ಗೆ ರಾಷ್ಟ್ರಗೀತೆಯಷ್ಟೇ ಉನ್ನತ ಸ್ಥಾನಮಾನವಿದೆ. ಜುಲೈ 9ರಂದು ಕೇಂದ್ರ ಸರ್ಕಾರ ನೀಡಿರುವ ನಿರ್ದೇಶನಗಳು ಎಲ್ಲಾ ರಾಜ್ಯಗಳಿಗೂ ಬದ್ಧವಾಗಿರುತ್ತವೆ" ಎಂದರು.
ಆದರೆ, ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, "ರಾಷ್ಟ್ರಗೀತೆಯಂತೆ ವಂದೇ ಮಾತರಂ ಹಾಡುವುದು ಕಡ್ಡಾಯವಲ್ಲ, ಅದು ಐಚ್ಛಿಕ. ಅಲ್ಲದೆ, ರಾಷ್ಟ್ರೀಯ ಗೀತೆಗೆ ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಯಷ್ಟೇ ಸಮಾನ ಸ್ಥಾನಮಾನ ನೀಡುವ ಕುರಿತ ಸಂವಿಧಾನಾತ್ಮಕ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇದೆ" ಎಂದು ಪೀಠಕ್ಕೆ ವಿವರಿಸಿದರು. ಇದನ್ನು ಮಾನ್ಯ ಮಾಡಿದ ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿದೆ.




