ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗವನ್ನು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಸಮಾಜದ ಮುಖ್ಯ ವಾಹಿನಿಗೆ ತಂದು ಸಂಘಟಿಸಬೇಕಾಗಿರುವುದರಿಂದ ಜ.೧೯ ರಂದು ರಾಜ್ಯ ಮಟ್ಟದ ಅಲೆಮಾರಿ ಮತ್ತು ಅರೆಅಲೆಮಾರಿ ಸಾಹಿತ್ಯ ಸಾಂಸ್ಕೃತಿಕ ಕಲೋತ್ಸವ ದಾವಣಗೆರೆಯ ವಿದ್ಯಾನಗರದಲ್ಲಿರುವ ಕುವೆಂಪು ಕನ್ನಡ ಭವನದಲ್ಲಿ ನಡೆಯಲಿದೆ ಎಂದು ಪ್ರಧಾನ ಕಾರ್ಯದರ್ಶಿ ಪ್ರತಾಪ್‌ಕುಮಾರ್ ಓ. ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಮುದಾಯದ ೪೬ ಜಾತಿಗಳು ಸಾಹಿತ್ಯ ಸಾಂಸ್ಕೃತಿಕ ಕಲೋತ್ಸವದಲ್ಲಿ ಪಾಲ್ಗೊಳ್ಳಲಿವೆ.
ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ಟೆಂಟ್, ರಸ್ತೆ ಬದಿಗಳಲ್ಲಿ ವಾಸಿಸುತ್ತಿರುವ ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗಕ್ಕೆ ಆಳುವ ಸರ್ಕಾರಗಳು ಸೂಕ್ತ ಪ್ರಾತಿನಿಧ್ಯ ನೀಡದಿದ್ದರೆ ಮುಂದಿನ ದಿನಗಳಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದೆಂದು ಎಚ್ಚರಿಸಿದರು.
ಅಲೆಮಾರಿ, ಅರೆಅಲೆಮಾರಿ ನಿಗಮ ರಚನೆಯಾಗಿದ್ದರೂ ಇನ್ನು ಅಧ್ಯಕ್ಷರ ನೇಮಕವಾಗಿಲ್ಲ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಂದಿನ ಮುಖ್ಯಮಂತ್ರಿ ಬಸವರಾಜ್‌ಬೊಮ್ಮಾಯಿ ಇವರುಗಳ ಬಳಿ ನಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದರೂ ನಿರ್ಲಕ್ಷಿಸುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ತಕ್ಕ ಪಾಠ ಕಲಿಸಬೇಕಾಗುತ್ತದೆಂದರು.
ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ್ ಯಾದವ್ ಮಾತನಾಡುತ್ತ ಇಲ್ಲಿಯವರೆಗೂ ಆಳಿದ ಎಲ್ಲಾ ಸರ್ಕಾರಗಳು ಅಲೆಮಾರಿ ಮತ್ತು ಅರೆಅಲೆಮಾರಿ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕೊಡುವಲ್ಲಿ ವಿಫಲವಾಗಿವೆ. ಇಂತಹ ಸಣ್ಣಪುಟ್ಟ ಜಾತಿಗಳನ್ನು ಸರ್ಕಾರ ಕಡೆಗಣಿಸುತ್ತಿರುವುದು ಯಾವ ನ್ಯಾಯ? ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಅತ್ಯಂತ ಹಿಂದುಳಿದಿರುವ ಸಮಾಜ ನಮ್ಮದು. ಹಾಗಾಗಿ ಜಾಗೃತಿಗೊಳಿಸುವುದಕ್ಕಾಗಿ ದಾವಣಗೆರೆಯಲ್ಲಿ ಜ.೧೯ ರಂದು ನಡೆಯಲಿರುವ ಸಾಹಿತ್ಯ, ಸಾಂಸ್ಕೃತಿಕ ಕಲೋತ್ಸವದಲ್ಲಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಲೆಮಾರಿ ಅರೆಅಲೆಮಾರಿ ಜನಾಂಗದವರು ಭಾಗವಹಿಸುವಂತೆ ಮನವಿ ಮಾಡಿದರು.
ಅಲೆಮಾರಿ ಮತ್ತು ಅರೆಅಲೆಮಾರಿ ಸಮುದಾಯದ ಗೌರವಾಧ್ಯಕ್ಷ ರಾಮುಗೋಸಾಯಿ ಮಾತನಾಡಿ ನಿರ್ಲಕ್ಷೆಗೊಳಗಾಗಿರುವ ನಮ್ಮ ಸಮುದಾಯವನ್ನು ಸಂಘಟಿಸುವುದಕ್ಕಾಗಿ ದಾವಣಗೆರೆಯಲ್ಲಿ ಮೂರನೆ ರಾಜ್ಯ ಮಟ್ಟದ ಕಲೋತ್ಸವವನ್ನು ಏರ್ಪಡಿಸಲಾಗಿದೆ. ಈಗಿನ ರಾಜ್ಯ ಕಾಂಗ್ರೆಸ್ ಸರ್ಕಾರ. ಇಲ್ಲಿಯವರೆಗೂ ಆಳಿದ ಎಲ್ಲಾ ಸರ್ಕಾರಗಳು ನಮ್ಮ ಸಮುದಾಯವನ್ನು ಕಡೆಗಣಿಸಿವೆ. ರಾಜ್ಯದಲ್ಲಿ ಆರು ಲಕ್ಷ ಜನಸಂಖ್ಯೆಯಿದ್ದು, ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಸರಿಯಾದ ಪಾಠ ಕಲಿಸಬೇಕಾಗುತ್ತದೆಂದು ಎಚ್ಚರಿಸಿದರು.
ರಾಜ್ಯ ಉಪಾಧ್ಯಕ್ಷೆ ಜ್ಯೋತಿ ದಾಸರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವಿ ದಾಸರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.