ಮಲ್ಲಪ್ಪನಹಳ್ಳಿ ಎಂ.ಎಲ್.ಗಿರಿಧರ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿ ವಿಲಾಸ ಸಾಗರ ಜಲಾಶಯದ ಭರ್ತಿಯಾಗಿ ಕೋಡಿ ಬೀಳಲು ಕೇವಲ ಒಂದು ಅಡಿ ಮಾತ್ರ ಬಾಕಿಯಿದೆ.
ಭದ್ರಾ ಡ್ಯಾಂನಿಂದ ಪ್ರತಿನಿತ್ಯ ಬೆಟ್ಟದತಾವರೆಕೆರೆ ಬಳಿಯ ಪಂಪ್ ಹೌಸ್ ನಿಂದ ಒಂದು ಪಂಪ್ ರನ್ ಮಾಡಿ ವಾಣಿ ವಿಲಾಸ ಸಾಗರ ಜಲಾಶಯಕ್ಕೆ 700 ಕ್ಯೂಸೆಕ್ ನೀರು ಪಂಪ್ ಮಾಡಲಾಗುತ್ತಿದೆ. ಆವಿ ಮತ್ತಿತರ ಕಾರಣಗಳಿಂದಾಗಿ ಸುಮಾರು 693 ಕ್ಯೂಸೆಕ್ ನಷ್ಟು ನೀರು ನಿತ್ಯ ಹರಿದು ಬಂದು ವಿವಿ ಸಾಗರದ ಒಡಲು ಸೇರುತ್ತಿದ್ದು ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ ಡಿಸೆಂಬರ್-18ರಂದು ಬುಧವಾರ 129.00 ಅಡಿ ತಲುಪಿದ್ದು ಕೋಡಿ ಬೀಳಲು(ಹರಿಯಲು) ಕೇವಲ ಒಂದು ಅಡಿ ಮಾತ್ರ ಬಾಕಿ ಇದೆ. ಪ್ರಸಕ್ತ ಸಾಲಿನಲ್ಲೇ ಕೋಡಿ ಬೀಳುವ ಸಾಧ್ಯತೆ ಇದೆ.
3ನೇ ಸಲ ಕೋಡಿ ಬೀಳುವತ್ತ ದಾಪುಗಾಲು-
ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸಪುರ ಬಳಿ ಇರುವ ವೇದಾವತಿ ನದಿಗೆ ಅಡ್ಡಲಾಗಿ ವಿವಿ ಸಾಗರ ಡ್ಯಾಂ ನಿರ್ಮಾಣ ಮಾಡಿ 1907ರಲ್ಲಿ ಲೋಕಾರ್ಪಣೆ ಮಾಡಿದ್ದರೂ ಕೂಡ 1933ರಲ್ಲಿ ಮೊದಲ ಬಾರಿಗೆ ಡ್ಯಾಂ ಭರ್ತಿಯಾಗಿ ಕೋಡಿ ಹರಿದಿತ್ತು.
ಇದಾದ 89 ವರ್ಷಗಳ ನಂತರ 2022ರಲ್ಲಿ 2ನೇ ಬಾರಿಗೆ ಕೋಡಿ ಹರಿದಿತ್ತು. ಇದೀಗ ಮೂರನೇ ಬಾರಿಗೆ ವಿವಿ ಸಾಗರ ಡ್ಯಾಂ ಕೋಡಿ ಬೀಳುವತ್ತ ಮುಖಮಾಡಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ವಾಣಿ ವಿಲಾಸ ಸಾಗರದ ಒಟ್ಟು ಎತ್ತರ 135 ಅಡಿ ಇದೆ. 130 ಅಡಿಗೆ ಡ್ಯಾಂ ಕೋಡಿ ಬೀಳುತ್ತದೆ.
ಭದ್ರಾದಿಂದ 700 ಕ್ಯೂಸೆಕ್ ನೀರು ಪಂಪ್-
ಜನವರಿ ಅಂತ್ಯದವರೆಗೆ ಭದ್ರಾ ಜಲಾಶಯದಿಂದ ವಿವಿ ಸಾಗರಕ್ಕೆ ನೀರು ಹರಿಸುವಂತೆ ವಿಶ್ವೇಶ್ವರಯ್ಯ ಜಲ ನಿಗಮವು ಆದೇಶ ಮಾಡಿದ್ದು ಪ್ರತಿದಿನ ಒಂದು ಪಂಪ್ ರನ್ ಮಾಡಿ ಸುಮಾರು 700 ಕ್ಯೂಸೆಕ್ ನೀರನ್ನು ಲಿಫ್ಟ್ ಮಾಡಿ ವೇದಾವತಿ ನದಿ ಮೂಲಕ ವಿವಿ ಸಾಗರಕ್ಕೆ ಹರಿಸಲಾಗುತ್ತಿದೆ.
ಇದರ ಜೊತೆಗೆ ಜಲಾಶಯದ ಮೇಲ್ಭಾಗದಲ್ಲಿ ಚದುರಿದಂತೆ ಅಲ್ಲಲ್ಲಿ ಮಳೆ ಆಗುತ್ತಿರುವುದು ಒಂದು ಕಡೆಯಾದರೆ, ಆಕಸ್ಮಿಕವಾಗಿ ಬಂದೆರಗುವ ಸೈಕ್ಲೋನ್ ಮಳೆಯಿಂದಾಗಿ ಒಂದಿಷ್ಟು ನೀರು ವಿವಿ ಸಾಗರದ ಒಡಲು ಸೇರುತ್ತಿದೆ. ಹಾಗೂ ಒಂದು ಅಡಿ ಬಾಕಿ ಇದ್ದು ಜನವರಿ ಅಂತ್ಯದ ವೇಳೆ ಕೋಡಿ ಬೀಳುವ ಸಾಧ್ಯತೆ ಇದೆ.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಜುಲೈ ಅಂತ್ಯದಲ್ಲಿ 113.08 ಅಡಿಯಷ್ಟಿದ್ದ ಜಲಾಶಯದ ನೀರಿನ ಮಟ್ಟ ಡಿಸೆಂಬರ್-18ರ ಹೊತ್ತಿಗೆ 129.00 ಅಡಿ ಮುಟ್ಟಿದೆ. ನವೆಂಬರ್-15 ರಿಂದ ಡಿಸೆಂಬರ್-18ರವರೆಗೆ ಕೇವಲ ಒಂದು ಅಡಿಯಷ್ಟು ನೀರು ಸಂಗ್ರಹ ಆಗಲಿಲ್ಲ. ಇದನ್ನ ಅರಿತ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಜಲ ಸಂಪನ್ಮೂಲ ಸಚಿವರು ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಇವರ ಮನವೊಲಿಕೆ ಮಾಡಿ 2025ರ ಜನವರಿ ಅಂತ್ಯದವರೆಗೆ ಭದ್ರಾದಿಂದ ವಿವಿ ಸಾಗರಕ್ಕೆ ನೀರು ಹರಿಸುವಂತೆ ಆದೇಶ ಮಾಡಿಸಿದ್ದರಿಂದಾಗಿ ಪ್ರಸಕ್ತ ಸಾಲಿನಲ್ಲಿ 3ನೇ ಬಾರಿಗೆ ಡ್ಯಾಂ ಭರ್ತಿಯಾಗುವ ಎಲ್ಲ ಸೂಚನೆಗಳು ಗೋಚರಿಸುತ್ತಿವೆ.
ಅತಿ ಹೆಚ್ಚು ನೀರು ಸಂಗ್ರಹವಾದ ಮಾಹಿತಿ-
ವೇದಾವತಿ ನದಿಗೆ ಅಡ್ಡಲಾಗಿ 1907ರಲ್ಲಿ ಡ್ಯಾಂ 1917 ರಲ್ಲಿ 120.60 ಅಡಿ, 1918ರಲ್ಲಿ 121.30 ಅಡಿ, 1919ರಲ್ಲಿ 128.30, 1920ರಲ್ಲಿ 125.50, 1932ರಲ್ಲಿ 125.50, ಅಡಿ, 1933ರಲ್ಲಿ 135.25 ಅಡಿ, 1934ರಲ್ಲಿ 130.24 ಅಡಿ, 1935ರಲ್ಲಿ 123,22 ಅಡಿ, 1956ರಲ್ಲಿ 125 ಅಡಿ, 1957ರಲ್ಲಿ 125.05 ಅಡಿ, 1958ರಲ್ಲಿ 124.50 ಅಡಿ, 2000ರಲ್ಲಿ 122.50ಅಡಿ, 2021ರಲ್ಲಿ 125.50 ಅಡಿ, 2022ರಲ್ಲಿ 135 ಅಡಿ, 2024ರ ಡಿಸೆಂಬರ್-18ರಲ್ಲಿ 129.00 ಅಡಿ ನೀರು ಸಂಗ್ರಹವಾಗಿದೆ.
ಚಿತ್ರದುರ್ಗ, ಚಳ್ಳಕೆರೆ ಹಾಗೂ ಹಿರಿಯೂರು ಭಾಗಗಳ ಜನವಸತಿ ಮತ್ತು ನಗರವಾಸಿಗಳಿಗೆ ಕುಡಿಯುವ ನೀರಿನ ಮೂಲ ವಿವಿ ಸಾಗರ ಜಲಾಶಯ. ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ತಾಲೂಕುಗಳ ಜನರ ಕುಡಿಯುವ ನೀರಿನ ದಾಹ ಹಿಂಗಿಸುವ ಜಲಾಶಯವು 12135 ಹೆಕ್ಟರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತದೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ತತ್ವಾರ ಬಂದಂತಹ ಸ್ಥಿತಿಯಲ್ಲಿ ಮೈಸೂರು ಮಹಾರಾಜರು ತಾಲೂಕಿನ ಮಾರಿಕಣಿವೆ ಬಳಿ 1907ರಲ್ಲಿ ಜಲಾಶಯ ನಿರ್ಮಿಸಿದ್ದರು.
ಜಲಾಶಯ ಹಿನ್ನೆಲೆ ಏನು?
ರಾಜ್ಯದ ಹಳೆಯ ಅಣೆಕಟ್ಟುಗಳಲ್ಲಿ ವಿವಿ ಸಾಗರ ಡ್ಯಾಂ ಕೂಡ ಒಂದಾಗಿದೆ. 1907ರಲ್ಲಿ ನಿರ್ಮಾಣ ಆಗಿರುವ ಈ ಡ್ಯಾಂಗೆ ಸುಮಾರು 117 ವರ್ಷಗಳ ಕಾಲ ಇತಿಹಾಸವಿದೆ. ಚಿಕ್ಕಮಗಳೂರು ಜಿಲ್ಲೆಯ ಬಾಬು ಬುಡನ್ ಗಿರಿ ಕಂದಕಗಳಲ್ಲಿ ಜನಿಸುವ “ವೇದಾ” ನದಿ ಕಡೂರಿನ ಬಳಿ “ಅವತಿ” ಎಂಬ ನದಿಯೊಂದಿಗೆ ಸೇರಿ ಮುಂದೆ ‘ವೇದಾವತಿ‘ ನದಿಯಾಗಿ ಹರಿದು ವಿವಿ ಸಾಗರದ ಒಡಲು ಸೇರುತ್ತದೆ.
ವಿವಿ ಸಾಗರ ಪ್ರವಾಸಿ ತಾಣ-
ವಾಣಿ ವಿಲಾಸ ಜಲಾಶಯ ನೋಡಲು ತೇಟ್ ಭಾರತ ಭೂಪಟದಂತೆ ಕಾಣುತ್ತಿದೆ. ಸುತ್ತಲು ಗುಡ್ಡ ಬೆಟ್ಟಗಳಿಂದ ಆವರಿಸಿರುವ ಡ್ಯಾಂ ನೋಡಲು ಜನರು ರಾಜ್ಯ ಸೇರಿದಂತೆ ಹೊರ ರಾಜ್ಯದಿಂದಲೂ ಪ್ರವಾಸಿಗರು ಆಗಮಿಸುತ್ತಾರೆ.
ಬೆಂಗಳೂರು-ತುಮಕೂರು-ಶಿರಾ-ಹಿರಿಯೂರು ಮಾರ್ಗವಾಗಿ 178 ಕಿಲೋ ಮೀಟರ್ ದೂರವಿದೆ.
ಹಿರಿಯೂರು ನಗರದಿಂದ ಹೊಸದುರ್ಗ ರಸ್ತೆ ಮಾರ್ಗವಾಗಿ 18 ಕಿಲೋ ಮೀಟರ್ ದೂರಕ್ಕೆ ಸಾಗಿದರೆ ವಾಣಿ ವಿಲಾಸ ಪುರ ಗ್ರಾಮದ ಮೂಲಕ ಹಾದು ಜಲಾಶಯ ತಲುಪಬಹುದು. ಚಿತ್ರದುರ್ಗ ಮಾರ್ಗವಾಗಿ ಆಗಮಿಸಿದರೆ ಮೇಟಿಕುರ್ಕೆ-ಯರದಕಟ್ಟೆ-ಶುಗರ್ ಫ್ಯಾಕ್ಟರ್ ಸರ್ಕಲ್ ಬಳಸಿಕೊಂಡು ಹೊಸದುರ್ಗ ಮಾರ್ಗವಾಗಿ ವಿವಿ ಸಾಗರ ಡ್ಯಾಂ ತಲುಪಬಹುದಾಗಿದೆ. ಚಿತ್ರದುರ್ಗದಿಂದ 54 ಕಿಲೋ ಮೀಟರ್ ದೂರದಲ್ಲಿದೆ.