ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳೆದ ಜೂನ್-4ರಂದು ನಡೆದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಈ ಕುರಿತು ಪತ್ರ ಬರೆದಿರುವ ಅಶೋಕ ಅವರು, ಈ ದುರ್ಘಟನೆ ಸೇರಿದಂತೆ ಸಾರ್ವಜನಿಕ ಸುರಕ್ಷತೆ, ಗುಂಪು ನಿಯಂತ್ರಣ, ಕ್ರೀಡಾ ಹಾಗೂ ಇತರೆ ಕಾರ್ಯಕ್ರಮಗಳ ಆಯೋಜನೆಗೆ ಸಂಬಂಧಿಸಿದಂತೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಈ ದುರಂತ ಜನರಲ್ಲಿ ಆತಂಕ ಮತ್ತು ಕಳವಳ ಉಂಟುಮಾಡಿದೆ.
ಕಾಲ್ತುಳಿತ ದುರ್ಘಟನೆಗೆ ಸಂಬಂಧಿಸಿದಂತೆ ಆಡಳಿತ ಲೋಪಗಳು, ಘಟನೆ ನಂತರ ಸರ್ಕಾರದ ಕ್ರಮಗಳು ಅನೇಕ ಸಂಶಯಗಳನ್ನು ಹುಟ್ಟುಹಾಕಿದೆ. ಕಾಲ್ತುಳಿತಕ್ಕೆ ಕಾರಣರಾದ ಬಲಾಢ್ಯರನ್ನು ರಕ್ಷಿಸಲಾಗುತ್ತಿದೆ. ಸತ್ಯ ಮರೆಮಾಚಲು ಮೂರು ರೀತಿಯ ತನಿಖೆ ಮಾಡಲಾಗುತ್ತಿದೆ. ಅಸಹಾಯಕ ಅಧಿಕಾರಿಗಳನ್ನು ಬಲಿಪಶು ಮಾಡಲಾಗಿದೆ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿವೆ ಎಂದು ಅಶೋಕ್ ಪತ್ರದಲ್ಲಿ ದೂರಿದ್ದಾರೆ.
ವಿಷಯ ಅತ್ಯಂತ ಸೂಕ್ಷ್ಮ ಮತ್ತು ಗಂಭೀರವಾಗಿದ್ದು ಸರ್ಕಾರ ಕೂಡಲೇ ಮೂರು ದಿನಗಳ ತುರ್ತು ಅಧಿವೇಶನ ಕರೆಯಬೇಕಿದೆ. ಕಾಲ್ತುಳಿತ ಘಟನೆಗೆ ಕಾರಣವಾದ ಸಂದರ್ಭಗಳ ಸಂಪೂರ್ಣ ತನಿಖೆ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಗುಂಪು ನಿಯಂತ್ರಣ ಮತ್ತು ಸುರಕ್ಷತಾ ಕ್ರಮಗಳ ಬಲವರ್ಧನೆ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಸಂತ್ರಸ್ತ ಕುಟುಂಬಗಳಿಗೆ ಪರಿಹಾರದ ವ್ಯವಸ್ಥೆ, ಭವಿಷ್ಯದಲ್ಲಿ ಇಂತಹ ಘಟನೆ ತಪ್ಪಿಸಲು ರಾಜ್ಯ ಸರ್ಕಾರದ ಯೋಜನೆಗಳ ಕುರಿತು ಅಧಿವೇಶನದಲ್ಲಿ ಚರ್ಚಿಸಬೇಕಿದೆ ಎಂದು ಅಶೋಕ್ ಪತ್ರದಲ್ಲಿ ತಿಳಿಸಿದ್ದಾರೆ.
ಕಾಲ್ತುಳಿತ ದುರಂತ: ಜೂನ್ 4ರಂದು ಸರ್ಕಾರದಿಂದ ಆರ್ಸಿಸಿಬಿ ಆಟಗಾರರನ್ನು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸರ್ಕಾರದಿಂದ ಸನ್ಮಾನಿಸಲಾಯಿತು.
ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ನಡೆಸುತ್ತಿದ್ದರಿಂದ ಅಪಾರ ಸಂಖ್ಯೆಯ ಅಭಿಮಾನಿಗಳು ಸ್ಟೇಡಿಯಂನತ್ತ ಸಾಗರೋಪಾದಿಯಲ್ಲಿ ಸೇರಿದ್ದರು. ಈ ವೇಳೆ ಜನಸಂದಣಿ ಹೆಚ್ಚಾಗಿ ಕಾಳ್ತುಳಿತ ಸಂಭವಿಸಿತು. ಆಗ 11 ಮಂದಿ ಅಭಿಮಾನಿಗಳು ಉಸಿರು ಚೆಲ್ಲಿದರೆ, 50ಕ್ಕೂ ಹೆಚ್ಚು ಜನ ಗಾಯಗೊಂಡು ಆಸ್ಪತ್ರೆ ಸೇರಿದರು.
ಇದಾದ ಬಳಿಕ ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಸೇರಿದಂತೆ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಯಿತು. ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಕೆಎಸ್ಸಿಎ ಕಾರ್ಯದರ್ಶಿ, ಖಜಾಂಚಿಗಳು ರಾಜೀನಾಮೆ ನೀಡಿದರು. ಆರ್ಸಿಬಿ ತಂಡದ ಮ್ಯಾನೇಜರ್ ಸೇರಿದಂತೆ ಕೆಲವರನ್ನು ಬಂಧಿಸಲಾಯಿತು. ಸರ್ಕಾರ ಸಿಐಡಿ ರಚನೆ ಮಾಡಿತು. ನ್ಯಾಯಾಂಗ ತನಿಖೆ ನಡೆಯುತ್ತಿದೆ ಎಂದು ಅಶೋಕ್ ತಿಳಿಸಿದ್ದಾರೆ.