ಹಿರಿಯೂರು ನಗರದ ಫುಟ್ ಪಾತಗಳ ಒತ್ತುವರಿ, ಪಾದಚಾರಿಗಳ ಪರದಾಟ

News Desk

ಮಲ್ಲಪ್ಪನಹಳ್ಳಿ ಎಂ.ಎಲ್.ಗಿರಿಧರ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಒತ್ತುವರಿ ಕಟ್ಟಡಗಳ ತೆರವು ಮಾಡಿ ರಸ್ತೆ ಅಗಲೀಕರಣ ಮಾಡುವುದು ಒಂದು ಕಡೆಯಾದರೆ ರಸ್ತೆ ಮತ್ತು ಫುಟ್ ಪಾತ್ ಒತ್ತುವರಿ ಮಾಡಿ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟು ಮಾಡುತ್ತಿರುವ ಬೀದಿ ಬದಿ ವ್ಯಾಪಾರಗಳ ತೆರವು ಮಾಡುವುದು ನಗರಸಭೆ ಆಡಳಿತಕ್ಕೆ ತಲೆ ನೋವು ತಂದಿದೆ.

ಅತ್ತ ಗಾಂಧಿ ವೃತ್ತದಿಂದ ಸಾಗರ್ ರೆಡ್ಡಿ ಹೋಟೆಲ್ ವರೆಗಿನ ಕಟ್ಟಡ ಮಾಲೀಕರು ಕಟ್ಟಡ ಹೊಡೆದರೆ ನಮ್ಮ ಜೀವನ ದುಸ್ತರವಾಗಲಿದ್ದು ಪರಿಹಾರ ಕೊಟ್ಟು ಕಟ್ಟಡ ಹೊಡೆಯಿರಿ ಎಂದು ಕೇಳುತ್ತಿದ್ದರೆ ಇತ್ತ ಅದೇ ಗಾಂಧಿ ವೃತ್ತದಿಂದ ರಂಜಿತ್ ಹೋಟೆಲ್ ವರೆಗೂ ಪಾದಚಾರಿಗಳು ಓಡಾಡುವ ಫುಟ್ ಪಾತನ್ನೇ ವ್ಯಾಪಾರಿಗಳು ಆಕ್ರಮಿಸಿಕೊಂಡು ಸಂಚಾರ ದಟ್ಟಣೆ ಉಂಟು ಮಾಡುತ್ತಿದ್ದಾರೆ.

ಪ್ರಧಾನ ರಸ್ತೆಯ ಇಕ್ಕೆಲಗಳಲ್ಲೂ ಪಾದಚಾರಿಗಳಿಗೆಂದೆ ಬಿಟ್ಟಿರುವ ಜಾಗದಲ್ಲಿ ಮುಖ್ಯ ರಸ್ತೆಯಲ್ಲಿರುವ ಅಂಗಡಿ ಮಳಿಗೆಯವರು ಅರ್ಧ ಫುಟ್ ಪಾತ್ ಜಾಗ ಅತಿಕ್ರಮಿಸಿಕೊಂಡಿದ್ದರೆ. ಉಳಿದಾರ್ಧ ಪುಟ್ ಪಾತ್ ರಸ್ತೆ ಜಾಗವನ್ನು ಬೀದಿ ಬದಿ ವ್ಯಾಪಾರಿಗಳು ಅಂಗಡಿಗಳನ್ನು ರಸ್ತೆ ಮೇಲೆ ಇಟ್ಟುಕೊಂಡು ವ್ಯಾಪಾರ ವಹಿವಾಟು ಮಾಡಿಕೊಂಡಿದ್ದಾರೆ.

ರಸ್ತೆಯ ತುದಿಯವರೆಗೂ ತಮ್ಮ ವ್ಯಾಪಾರದ ವಸ್ತುಗಳನ್ನಿಟ್ಟುಕೊಂಡು ಪಾದಚಾರಿಗಳು ರಸ್ತೆಯಲ್ಲಿ ನಡೆಯುವಂತಾಗಿದೆ. ಇದು ಸಾಲದು ಎಂಬಂತೆ ಪಾದಚಾರಿ ಜಾಗದ ಮೇಲೆ ಶೀಟ್ ಬಗ್ಗಿಸಿಕೊಂಡ ಪುಣ್ಯಾತ್ಮರೂ ಇಲ್ಲಿ ಕಾಣಸಿಗುತ್ತಾರೆ. ಗಾಂಧಿ ವೃತ್ತ, ನೆಹರೂ ಮಾರ್ಕೆಟ್ ಎಡ  ಬಲದ ಎರಡು ರಸ್ತೆಗಳು, ಟಿಟಿ ರಸ್ತೆ, ಗಾಂಧಿ ವೃತ್ತದಿಂದ ಶ್ರೀ ಶೈಲ ಸರ್ಕಲ್ ಹೋಗುವ ರಸ್ತೆ, ಚರ್ಚ್ ರಸ್ತೆ, ಡಿಸಿಸಿ ಬ್ಯಾoಕ್ ಎಡಗಡೆ ರಸ್ತೆ ಹೀಗೆ ನಗರದ ಪ್ರಮುಖ ರಸ್ತೆಗಳೆಲ್ಲ ಟ್ರಾಫಿಕ್ ಕಿರಿಕಿರಿಗೆ ದಿನವೂ ಸಿಲುಕುತ್ತವೆ.

ಬೈಕ್, ಕಾರುಗಳನ್ನು ಎಲ್ಲೆಂದರಲ್ಲಿ ನಿಲುಗಡೆ ಮಾಡಿ ಹೋಗುವ ಚಾಲಕರಿಗೆ ಯಾರ ಭಯವೂ ಇಲ್ಲದಂತಾಗಿದೆ. ಸಾಮಾನ್ಯ ಪ್ರಜ್ಞೆ ಎಂಬುದು ವಾಹನ ಸವಾರರಲ್ಲೂ ಕಡಿಮೆಯಾಗಿದ್ದು ಶಿಸ್ತಾಗಿ ಸಾಲಿಗೆ ನಿಲ್ಲಿಸಿರುವ ವಾಹನಗಳಿಗೆ ಅಡ್ಡಲಾಗಿ ತಮ್ಮ ವಾಹನ ನಿಲ್ಲಿಸಿ ಹೋಗುವ ಮಂದಿ ಊರು ತುಂಬಾ ಸಿಗುತ್ತಾರೆ.

ಕಳೆದ ನಗರಸಭೆಯ ಸಾಮಾನ್ಯ ಸಭೆಯಲ್ಲೂ ಟ್ರಾಫಿಕ್ ಜಾಮ್ ಬಗ್ಗೆ ವಿಸ್ತೃತ ಚರ್ಚೆ ನಡೆಯಿತಾದರು ಸಹ ಅದು ಅವತ್ತಿಗೆ ಮುಗಿಯಿತು. ನಗರಸಭೆಯಿಂದ ಕಟ್ಟು ನಿಟ್ಟಾದ ನಿರ್ಧಾರ ಮಾಡಿ ನಗರದ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಯಾರಿಗೂ ಪುರುಸೊತ್ತು ಇದ್ದಂತಿಲ್ಲ.

ಈ ಹಿಂದಿನ ಪೌರಾಯುಕ್ತರು ನೆಹರೂ ವೃತ್ತದ ಆಸುಪಾಸಿನಲ್ಲಿ ಎಲ್ಲೆಂದರಲ್ಲಿ ತಳ್ಳುಗಾಡಿಗಳನ್ನಿಟ್ಟುಕೊಂಡು ಪಾನಿಪೂರಿ, ಗೋಬಿ ಮಂಚೂರಿ ವ್ಯಾಪಾರ ಮಾಡುತ್ತಿದ್ದ ಸುಮಾರು 25 ಕ್ಕೂ ಹೆಚ್ಚು ಅಂಗಡಿಗಳನ್ನು ನೆಹರೂ ಮೈದಾನದ ಒಂದು ಮಗ್ಗುಲಿಗೆ ಶಿಫ್ಟ್ ಮಾಡಿಸಿ ನೆಹರೂ ವೃತ್ತದ ಜನದಟ್ಟಣೆ ತಪ್ಪಿಸಿದ್ದರು.

 ಆದರೆ ಇದೀಗ ಕ್ರಿಕೆಟ್ ಆಡಲು ತೊಂದರೆಯಾಗುತ್ತಿದೆ ಎಂದು ಅಷ್ಟೂ ಗೋಬಿ ಮಂಚೂರಿ, ಪಾನಿಪೂರಿ ಅಂಗಡಿಗಳವರನ್ನು ಮೈದಾನದಿಂದ ಹೊರಹಾಕಲಾಗಿದೆ. ಇದೀಗ ಅವರು ಮತ್ತದೇ ಪ್ರಧಾನ ರಸ್ತೆಯ ಅಕ್ಕಪಕ್ಕ ಬಂದು ಕುಳಿತಿದ್ದಾರೆ.

ನಗರದ ಅರುಣ್ ಟೆಕ್ಸ್ ಟೈಲ್ಸ್ ಪಕ್ಕದ ಲಕ್ಕವ್ವನಹಳ್ಳಿ ರಸ್ತೆಗೆ ಪ್ರಧಾನ ರಸ್ತೆಯಿಂದ ವಾಹನಗಳು ತಿರುಗಿಕೊಳ್ಳಲು ಹರಸಾಹಸ ಪಡುತ್ತವೆ. ಸ್ವಲ್ಪ ಎಚ್ಚರ ತಪ್ಪಿದರು ಎದುರಿಗಿನ ಬೇಕರಿಗೆ ಡಿಕ್ಕಿಯಾಗುತ್ತವೆ. ಅಲ್ಲಿನ ರಸ್ತೆಯಲ್ಲಿ ಹೋಗುವ ಬಸ್ ತಿರುಗಿ ಹೋಗುವವರೆಗೂ ಪ್ರಧಾನ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಮಾಮೂಲು. ನೆಹರೂ ಮಾರುಕಟ್ಟೆ ಮುಂಭಾಗ ಖಾಸಗಿ ಬಸ್ ನಿಲ್ದಾಣವಿದ್ದರೂ ಸಹ ಬಸ್ಸುಗಳು ಗಾಂಧಿ ವೃತ್ತದಲ್ಲಿ ನಿಲುಗಡೆ ಪಡೆಯುತ್ತವೆ. ನಡುರಸ್ತೆಯಲ್ಲೇ ನಿಲ್ಲುವುದರಿಂದ ಜನದಟ್ಟಣೆ ಇಲ್ಲಿ ಸರ್ವೇ ಸಾಮಾನ್ಯ ಎಂಬಂತಾಗಿದೆ.

ಹಣ್ಣು, ಹೂ ಅಂಗಡಿಗಳವರು ರಸ್ತೆಯ ತುದಿಗೇ ಬಂದು ಕೂರುವುದರಿಂದ ವಾಹನ ಸವಾರರು ಮತ್ತು ಪಾದಚಾರಿಗಳು ಇಬ್ಬರೂ ರಸ್ತೆಯಲ್ಲೇ ಸಂಚರಿಸುವ ಸ್ಥಿತಿ ಇದೆ.

ನಗರಸಭೆ ಮುಂಭಾಗವೇ ಫುಟ್ ಪಾತನಲ್ಲಿ ತರಹೇವಾರಿ ಬೀದಿ ಬದಿ ವ್ಯಾಪಾರಿಗಳು ರಸ್ತೆ ಆಕ್ರಮಸಿಕೊಂಡು ಟ್ರಾಫಿಕ್ ಜಾಮ್ ಗೆ ತಮ್ಮ ಕೈಲಾದ ಸೇವೆ ಸಲ್ಲಿಸುತ್ತಿದ್ದಾರೆ. ಕಟ್ಟಡ ಹೊಡೆಯುತ್ತಾರೆ. ರಸ್ತೆ ಹಿರಿದಾಗುತ್ತದೆ ಸಂಚಾರ ಸುಲಭವಾಗುತ್ತದೆ ಎಂಬುದೇನೋ ನಿಜ.

ಆದರೆ ವ್ಯಾಪಾರಿಗಳು ಪಾದಚಾರಿ ರಸ್ತೆಯನ್ನು ತಮ್ಮ ನಿತ್ಯದ ವ್ಯಾಪಾರ ಚಟುವಟಿಕೆಗಳಿಗೆ ಬಳಸಿಕೊಂಡರೆ ಟ್ರಾಫಿಕ್ ಜಾಮ್ ಎಂಬುದು ವಾಸಿಯಾಗದ ಕಾಯಿಲೆಯಾಗಿ ಉಳಿಯದೇ ಇರುತ್ತದೆಯೇ? ಹೆಚ್ಚಿದ ವಾಹನಗಳ ಸಂಖ್ಯೆ, ಲಕ್ಷದ ಹತ್ತಿರ ಬಂದ ನಗರದ ಜನಸಂಖ್ಯೆ, ಗ್ರಾಮೀಣ ಭಾಗದಿಂದ ನಿತ್ಯವೂ ನಗರಕ್ಕೆ ಬರುವ ಸಾವಿರಾರು ವಿದ್ಯಾರ್ಥಿಗಳು, ಕಾರ್ಮಿಕರು, ನೌಕರರು, ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಹತ್ತಾರು ಶಾಲಾ ಕಾಲೇಜ್, ಸರ್ಕಾರಿ ಕಚೇರಿಗಳು ಸೇರಿದಂತೆ ಟ್ರಾಫಿಕ್ ಜಾಮ್ ಕಿರಿಕಿರಿಗೆ ಸಾವಿರ ಕಾರಣಗಳಿದ್ದರು ಸಹ ನಗರಸಭೆ ಮತ್ತು ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ನಗರ ಭಾಗದ ಟ್ರಾಫಿಕ್  ಜಾಮ್ ಗೆ ಕಡಿವಾಣ ಹಾಕಬೇಕಿದೆ.

ಪಾದಚಾರಿ ರಸ್ತೆಯ ಮೇಲೆ ವ್ಯಾಪಾರ ಮಾಡುವವರನ್ನು ತೆರವು ಗೊಳಿಸಲಾಗುವುದು. ನಗರ ಬೆಳೆದಿದ್ದು ಸಂಚಾರ ದಟ್ಟಣೆ ಸಹಜವಾಗಿಯೇ ಜಾಸ್ತಿಯಾಗಿದೆ. ಈಗಾಗಲೇ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಮೊನ್ನೆ ನಡೆದ ಸಭೆಯಲ್ಲೂ ತೀರ್ಮಾನಿಸಲಾಗಿದ್ದು ಪೊಲೀಸ್ ಇಲಾಖೆ ಮತ್ತು ನಗರಸಭೆ ಸಹಯೋಗದಲ್ಲಿ ಹಲವು ಕ್ರಮ ಕೈಗೊಳ್ಳಲು ಯೋಜಿಸಲಾಗಿದೆ.

ನೆಹರೂ ಮಾರುಕಟ್ಟೆ ಮುಂಭಾಗ ಟ್ರಾಫಿಕ್ ತಪ್ಪಿಸಲು ಮಾರುಕಟ್ಟೆಗೆ ಮೆಟ್ಟಿಲು ನಿರ್ಮಿಸಿ ಮೇಲೆಯೇ ವ್ಯಾಪಾರ ಮಾಡಲು ಅನುವು ಮಾಡಿಕೊಡಲಾಗುವುದು. ಎ.ವಾಸಿಂ, ಪೌರಾಯುಕ್ತರು, ನಗರಸಭೆ, ಹಿರಿಯೂರು.

 

 

- Advertisement -  - Advertisement -  - Advertisement - 
Share This Article
error: Content is protected !!
";